ಕರ್ನಾಟಕ

ಟ್ರೇಲರ್ ಮೂಲಕ ಸದ್ದು ಮಾಡುತ್ತಿದೆ 'ಅನಾಮಧೇಯ ಅಶೋಕ್ ಕುಮಾರ್'

​SKN ಫಿಲಂಸ್ ಲಾಂಛನದಲ್ಲಿ ನಿರ್ಮಲಾ ಕುಮಾರ್ ಹಾಗು ರಮ್ಯ ಸಾಗರ್ ಕುಮಾರ್ ನಿರ್ಮಿಸಿರುವ, ಎಲ್ ಸಾಗರ್ ಕುಮಾರ್ ನಿರ್ದೇಶನದ "ಅನಾಮಧೇಯ ಅಶೋಕ್ ಕುಮಾರ್" ಚಿತ್ರ ಫೆಬ್ರವರಿ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಜನಪ್ರಿಯ ನಟ ಕಿಶೋರ್ ಕುಮಾರ್ ಹಾಗೂ "ಆಚಾರ್ & ಕೋ" ಚಿತ್ರದ ಹರ್ಷಿಲ್ ಕೌಶಿಕ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ದೇಶದಲ್ಲಿ ನಡೆದ ಕೆಲವು ಕ್ರೈಮ್ ಫಟನೆಗಳು ಹಾಗೂ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ಈ ಚಿತ್ರದ ಕಥೆಗೆ ಸ್ಪೂರ್ತಿ. ಇದು ಸಂಜೆ ಆರರಿಂದ ಬೆಳಗ್ಗೆ ಆರರವರೆಗೂ ನಡೆಯುವ ಕಥೆ. ಪ್ರಸಿದ್ದ ವಕೀಲರೊಬ್ಬರ ಕೊಲೆಯ ಸುತ್ತ ನಡೆಯುವ ಕಥೆಯೂ ಹೌದು. 



ಚಿತ್ರದಲ್ಲಿ ಕಿಶೋರ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ಹಾಗೂ ಹರ್ಷಿಲ್ ಕೌಶಿಕ್ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧೀಂದ್ರ ನಾಯರ್, ಕಾಂತರಾಜ್ ಕಡ್ಡಿಪುಡಿ, ವೀರೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಫೆಬ್ರವರಿ 7 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ.



ಇನ್ನು ಚಿತ್ರದ ಬಗ್ಗೆ ನಟ ಕಿಶೋರ್ ಕುಮಾರ್, ಮಾತನಾಡಿ ನಾನು ಈ ಚಿತ್ರದಲ್ಲಿ ಪತ್ರಕರ್ತನಾಗಿ ಅಭಿನಯಿಸಿದ್ದೇನೆ‌‌. "ಅನಾಮಧೇಯ" ಎಂದರೆ ಹೆಸರಿಲ್ಲದವನು ಎಂದು. ನಮ್ಮ ಚಿತ್ರದಲ್ಲಿ "ಅನಾಮಧೇಯ ಅಶೋಕ್ ಕುಮಾರ್"ಯಾರು? ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಅದು ಯಾರು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು. ಹೊಸತಂಡದ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಚಿತ್ರದಲ್ಲಿ ನಟಿಸಿರುವ ವೀರೇಶ್, ಸುಷ್ಮ, ಗಗನ, ದೀಪಕ್ ಸಂಗೀತ ನಿರ್ದೇಶಕ ಆಜಾದ್, ಛಾಯಾಗ್ರಾಹಕ ಸುನೀಲ್ ಹೊನಳ್ಳಿ, ಸಂಕಲನಕಾರ ಯೇಸು ಹಾಗೂ ವಿತರಕರಾದ ಕುನಾಲ್ ಹಾಗೂ ರವಿಚಂದ್ರನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.