ಕೆಲ ದಿನಗಳ ಹಿಂದೆ ರಿಂಗ್ ಬದಲಿಸಿಕೊಂಡಿದ್ದ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಸದ್ದಿಲ್ಲದೆ ಹಸೆಮಣೆ ಏರಿದ್ದಾರೆ. ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವೆಯ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿದ್ದಾರ್ಥ್ ಮತ್ತು ಅದಿತಿ ಅವರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈಗ ತಮ್ಮ ಪ್ರೀತಿಗೆ ಅಧಿಕೃತ ಮದ್ರೆ ಒತ್ತಿರುವ ಜೋಡಿ ಸದ್ದೇ ಇಲ್ಲದೆ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ದಿನಾಂಕದ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರದ ಜೋಡಿ ಕೊನೆಗೂ ಫ್ಯಾನ್ಸ್ ಗೆ ತಮ್ಮ ಮದುವೆಯ ಫೊಟೋವನ್ನ ರಿವೀಲ್ ಮಾಡಿದ್ದಾರೆ.
ಸಿದ್ದಾರ್ಥ್ ಮತ್ತು ಅದಿತಿ ಬಾಳಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ನವ ಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
ದಕ್ಷಿಣ ಭಾರತದ ಶೈಲಿಯಲ್ಲಿ ಅದಿತಿ ರಾವ್ ಹೈದರಿ ಹಾಗೂ ಸಿದ್ದಾರ್ಥ್ ವಿವಾಹ ನೆರವೇರಿದೆ. ‘ನೀನೇ ನನ್ನ ಚಂದ್ರ, ನೀನೇ ನನ್ನ ಸೂರ್ಯ, ನೀನೇ ನನ್ನ ನಕ್ಷತ್ರ’ ಎಂದು ಕ್ಯಾಪ್ಷನ್ ನೀಡುವ ಮೂಲಕ ಅದಿತಿ ರಾವ್ ತಮ್ಮ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.