ಕರ್ನಾಟಕ

ಕೋಮು ಗಲಭೆಗಳಿಗೆ ಬಿಜೆಪಿಯೇ ಪ್ರಚೋದನೆ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ

ಕೋಮು ಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಸಂಘರ್ಷಗಳಿಗೆ ಬಿಜೆಪಿಯೇ ನೇರ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ

ಮೈಸೂರು : ಈ ಬಾರಿ ಅರವತ್ತು ಸಾವಿರ ಗಣೇಶಗಳ ಪ್ರತಿಷ್ಠಾಪನೆಯಾಗಿತ್ತು. ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಗಮಂಗಲದಲ್ಲಿ ಗಲಭೆ ನಡೆದಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದ್ದು, ಡಿ.ವೈ.ಎಸ್.ಪಿ ಅವರನ್ನು ಅಮಾನತು ಮಾಡಲಾಗಿದೆ   ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 

ಮೈಸೂರಿನ  ವಿಮಾನ ನಿಲ್ದಾಣದಲ್ಲಿ  ಮಾಧ್ಯಮ ದವರೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ, ಕೋಮು ಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಸಂಘರ್ಷಗಳಿಗೆ ಬಿಜೆಪಿಯೇ ನೇರ ಕಾರಣ ಎಂದು ಆರೋಪಿಸಿದರು.

ಡಿನೋಟಿಫೈ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ಬಗ್ಗೆ ಪರಿಶೀಲನೆ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪರವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021 ರಿಂದ ಲೋಕಾಯುಕ್ತದವರು ತನಿಖೆ ನಡೆಸದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಿನ್ನೆ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿದಂತೆ ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು, ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿ ,  ಜಿಪಿಓ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.

ಸರ್ಕಾರ ಯಾರ ಮೇಲೂ ಆರೋಪ ಮಾಡುವುದಿಲ್ಲ
ವಿಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಸರ್ಕಾರದ ಮೇಲೆ ಆರೋಪ ಹೊರಸುತ್ತಿವೆಯೇ ಎಂಬ ಮಾಧ್ಯಮದವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿ, ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಎಂಡ್ ರನ್ ಮಾಡುವವರಾಗಿದ್ದು, ಯಾವ ಆರೋಪಕ್ಕೂ ತಾರ್ಕಿಕ  ಅಂತ್ಯ ಕಾಣಿಸುವುದಿಲ್ಲ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದರು.