ಹೈದರಾಬಾದ್ : ತೆಲುಗು ಮೆಗಾಸ್ಟಾರ್ ಚಿರಂಜೀವಿಯವರು ಗಿನ್ನಿಸ್ ವಿಶ್ವ ದಾಖಲೆಯ ಗೌರವಕ್ಕೆ ಭಾಜನರಾಗಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದ ಅತ್ಯಂತ ಕ್ರಿಯಾತ್ಮಕ ತಾರೆ ಎಂಬ ಗಿನ್ನಿಸ್ ದಾಖಲೆಯ ಪುಟದಲ್ಲಿ ಚಿರಂಜೀವಿ ಹೆಸರು ಸೇರ್ಪಡೆಯಾಗಿದೆ.
ಭಾನುವಾರ ಹೈದರಾಬಾದ್ನಲ್ಲಿ ಗಿನ್ನಿಸ್ ವಿಶ್ವದಾಖಲೆ ವಿತರಣಾ ಕಾರ್ಯಕ್ರಮ ನಡೆದಿದ್ದು, ಗಿನ್ನಿಸ್ ವಿಶ್ವ ದಾಖಲೆಯ ಪ್ರತಿನಿಧಿಗಳು ಚಿರಂಜೀವಿಗೆ ಅವರಿಗೆ ಪ್ರಮಾಣ ಪತ್ರವನ್ನ ನೀಡಿ ಗೌರವಿಸಿದ್ದಾರೆ.
ಹೊಸ ಸಾಧನೆಯ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ. ಇದು ನನ್ನ ಅವಿಸ್ಮರಣೀಯ ಕ್ಷಣ. ನಾನು ಮಾಡಿದ ನೃತ್ಯಗಳಿಂದಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಸೇರುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ನೃತ್ಯವು ನನ್ನ ವೃತ್ತಿ ಜೀವನದುದ್ದಕ್ಕೂ ಉತ್ತಮ ಪ್ರಶಂಸೆ ತಂದುಕೊಟ್ಟಿದೆ. ನನ್ನನ್ನು ನಟನಾಗಿ ಮಾಡುವಲ್ಲಿ ನಿರ್ದೇಶಕರು, ನಿರ್ಮಾಪಕರು, ನೃತ್ಯ ಸಂಯೋಜಕರ ಕೊಡುಗೆ ಅಪಾರವಾಗಿದೆ. ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.