ದೇಶ

ಬಿಜೆಪಿ ನಾಯಕನೊಂದಿಗೆ ವಾಗ್ವಾದ; ಸಮವಸ್ತ್ರವನ್ನು ತೆಗೆದುಹಾಕಿದ ಪೊಲೀಸ್ : ಹಳೆಯ ವಿಡಿಯೋ ಭಾರಿ ವೈರಲ್

ಮೇಲಧಿಕಾರಿಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಮುಂದೆ ಪೊಲೀಸ್ ಅಧಿಕಾರಿಯೊಬ್ಬರು ಸಮವಸ್ತ್ರವನ್ನು ತೆಗೆದುಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಭೋಪಾಲ್: ಬಿಜೆಪಿ ನಾಯಕರೊಬ್ಬರ ಬೆದರಿಕೆಯಿಂದಾಗಿ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಮವಸ್ತ್ರವನ್ನ ಎಲ್ಲರೆದುರು ತೆಗೆದುಹಾಕಿದ್ದಾರೆ. ಮೇಲಾಧಿಕಾರಿಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಮುಂದೆ ಸಮವಸ್ತ್ರವನ್ನು ತೆಗೆದುಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ರಾಜಕೀಯ ಚರ್ಚೆಯನ್ನ ಹುಟ್ಟುಹಾಕಿದೆ. 

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಈ ವರ್ಷದ ಫೆಬ್ರವರಿ 2 ರಂದು ನಡೆದ ಘಟನೆ ಈಗ ವೈರಲ್ ಆಗುತ್ತಿದೆ. ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಚರಂಡಿ ನಿರ್ಮಾಣದ ಬಗ್ಗೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿನೋದ್ ಮಿಶ್ರಾ ಮತ್ತು ಸ್ಥಳೀಯ ನಿವಾಸಿಗಳ ನಡುವೆ ವಿವಾದ ಭುಗಿಲೆದ್ದಿತ್ತು. ವಾಗ್ವಾದದ ನಂತರ, ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮತ್ತು ಪೊಲೀಸರು ಸಮಸ್ಯೆಯನ್ನು ಪರಿಹರಿಸಲು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಲಾಗಿತ್ತು.

ಸಭೆಯಲ್ಲಿ ಸ್ಥಳೀಯ ಕೌನ್ಸಿಲರ್ ಪತಿ, ಬಿಜೆಪಿ ಮುಖಂಡ ಅರ್ಜುನ್ ಗುಪ್ತಾ ಅವರು ಮಿಶ್ರಾ ಅವರಿಗೆ ಸಮವಸ್ತ್ರ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮಿಶ್ರಾ ಅವರು ಟೌನ್ ಇನ್ಸ್ಪೆಕ್ಟರ್ ಮತ್ತು ಇತರ ಅಧಿಕಾರಿಗಳು ಸೇರಿದಂತೆ ಎಲ್ಲರ ಮುಂದೆ ತಮ್ಮ ಸಮವಸ್ತ್ರ ಬಿಚ್ಚಿದ್ದರು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ NDTV ವರದಿ ಮಾಡಿದೆ.

ಘಟನೆಯ ನಂತರ, ಮಿಶ್ರಾ ಅವರ ನಡವಳಿಕೆಗಾಗಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನೂ ವೈರಲ್ ಆಗಿರುವ ಈ ವೀಡಿಯೊ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದ್ದು, ಪ್ರತಿಪಕ್ಷಗಳು ಆಡಳಿತರೂಢ ಬಿಜೆಪಿ ವಿರುದ್ಧ ತಿರುಗಿ ಬಿದ್ದಿವೆ. ಈ ಹಿಂದೆ ಘಟನೆ ಸಂಬಂಧ ಟ್ವೀಟ್ ಮಾಡಿದ್ದ ಮಧ್ಯಪ್ರದೇಶ ಕಾಂಗ್ರೆಸ್ "ಇದು ಅಧಿಕಾರದ ದುರುಪಯೋಗ! ಬಿಜೆಪಿ ಕೌನ್ಸಿಲರ್ ಒಬ್ಬರ ಪತಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಗೆ ಹೇಗೆ ಬೆದರಿಕೆ ಹಾಕಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಳಮಟ್ಟದಲ್ಲಿದೆ. ಅಪರಾಧಗಳು ನಿಯಂತ್ರಣದಲ್ಲಿಲ್ಲ, ಮತ್ತು ಪೊಲೀಸರು ಅಸಹಾಯಕರಾಗಿ ರಾಜಕೀಯ ಒತ್ತಡದಲ್ಲಿದ್ದಾರೆ ಎಂದು ಕಿಡಿಕಾರಿದ್ದರು.