ಒಟ್ಟಾವಾ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಮುಂದುವರೆದಿದ್ದು ಎಡ್ಮಂಟನ್ ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಶುಕ್ರವಾರ ಮಧ್ಯರಾತ್ರಿ 12.30 (ಸ್ಥಳೀಯ ಕಾಲಮಾನ)ರ ಸುಮಾರಿಗೆ ಎಡ್ಮಂಟನ್ ನ 107 ಅವೆನ್ಯೂ ಪ್ರದೇಶದಲ್ಲಿರುವ ಅಪಾರ್ಟ್ ಮೇಂಟ್ ನಲ್ಲಿ 20 ವರ್ಷದ ಹರ್ಷನ್‌ದೀಪ್ ಸಿಂಗ್ ನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿ ನಡೆದ ಬಳಿಕ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಹರ್ಷದೀಪ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಸಿಂಗ್ ಮೃತಪಟ್ಟಿದ್ದರು.
ಹರ್ಷನ್‌ದೀಪ್ ಸಿಂಗ್ ಮೇಲೆ ಮೂವರು ದಾಳಿ ನಡೆಸಿ ಗುಂಡು ಹಾರಿಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇವಾನ್ ರೈನ್ ಮತ್ತು ಜುಡಿತ್ ಸಾಲ್ಟ್ಯಾಕ್ಸ್ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದಾರೆ.
ಇನ್ನು ಇತ್ತೀಚೆಗೆ ಕೆನಡಾದ ಸರ್ನಿಯಾದಲ್ಲಿ 22 ವರ್ಷದ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಕೊಲೆಯನ್ನು ಈತನ ಫ್ಲ್ಯಾಟ್ ಮೇಟ್ ಮಾಡಿದ್ದು, ಕಿಚನ್ ನಲ್ಲಿ ಇವರಿಬ್ಬರ ನಡುವೆ ಪ್ರಾರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಕೊಲೆಯಾದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಇಲ್ಲಿನ ಲ್ಯಾಂಬ್ಟನ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ ಗುರಾಸಿಸ್ ಸಿಂಗ್ ಎಂದು ಗುರುತಿಸಲಾಗಿದೆ.