ಜೊಹಾನ್ಸ್‌ಬರ್ಗ್: ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪದಲ್ಲಿ ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟಿಗರನ್ನು ಅರೆಸ್ಟ್ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದ ಆದ್ಯತಾ ಅಪರಾಧ ತನಿಖಾ ನಿರ್ದೇಶನಾಲಯ 2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟದ ಸೆಕ್ಷನ್ 15 ರ ಅಡಿಯಲ್ಲಿ ಮೂವರನ್ನು ಅರೆಸ್ಟ್ ಮಾಡಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲೊನ್ವಾಬೊ ತ್ಸೊಟ್ಸೊಬೆ, ವಿಕೆಟ್ಕೀಪರ್-ಬ್ಯಾಟರ್ ಥಾಮಿ ತ್ಸೊಲೆಕಿಲ್ ಮತ್ತು ಮಧ್ಯಮ ವೇಗಿ ಎಥಿ ಎಂಬಾಲಾಟಿ ಬಂಧಿತ ಕ್ರಿಕೆಟಿಗರು.
2015-16 ರಲ್ಲಿ ನಡೆದಿದ್ದ ದೇಶೀಯ ಟಿ20 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಇವರ ಮೇಲಿದೆ. 2016 ರಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು. ಸುದೀರ್ಘ ತನಿಖೆ ನಡೆಸಿದ ನಿರ್ದೇಶನಾಲಯ ಈಗ ಈ ಮೂವರನ್ನೂ ಅರೆಸ್ಟ್ ಮಾಡಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ಮ್ಯಾಚ್ ಫಿಕ್ಸಿಂಗ್ ಮಾಡುವಂತೆ ಆಟಗಾರರನ್ನು ಸಂಪರ್ಕಿಸುತ್ತಿದ್ದ ಬುಕ್ಕಿ ಗುಲಾಬ್ ಬೋಡಿಯನ್ನು 2018 ರ ಜುಲೈನಲ್ಲಿ ಅರೆಸ್ಟ್ ಮಾಡಲಾಗಿತ್ತು. ಆತನ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ ನಲ್ಲಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈಗ ಅರೆಸ್ಟ್ ಆಗಿರುವ ತ್ಸೊಟ್ಸೊಬೆ ಜೂನ್ 2010 ರಲ್ಲಿ ಟ್ರಿನಿಡಾಡ್ ನ ಪೋರ್ಟ್ ಆಫ್ ಸ್ಪೇನ್ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದು, ಒಟ್ಟು ಅವರು ಐದು ಟೆಸ್ಟ್ಗಳನ್ನು ಆಡಿದ್ದರು.
ಕಳೆದ ವರ್ಷ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸಚಿತ್ರ ಸೇನಾನಾಯಕೆ ಯನ್ನು ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಲಂಕಾ ಪ್ರೀಮಿಯರ್ ಲೀಗ್ ನ 2020ರ ಆವೃತ್ತಿಯಲ್ಲಿ ಸೇನಾನಾಯಕೆ ಇಬ್ಬರು ಆಟಗಾರರಿಗೆ ಫಿಕ್ಸಿಂಗ್ ನಡೆಸಲು ಪ್ರಚೋದಿಸಿದ್ದಾರೆ ಎಂದು ಆರೋಪದಲ್ಲಿ ತಿಳಿದುಬಂದಿತ್ತು.