ಇಸ್ತಾಂಬುಲ್: ಇಂಡಿಗೋ ವಿಮಾನ ಹಾರಾಟದಲ್ಲಿ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಟರ್ಕಿಯ ಇಸ್ತಾಂಬುಲ್ ನಲ್ಲಿ ಸುಮಾರು 400 ಕ್ಕೂ ಹೆಚ್ಚು ಪ್ರಯಾಣಿಕರು 24 ಗಂಟೆಯಿಂದ ತೊಂದರೆಗೆ ಸಿಲುಕಿದ್ದಾರೆ.
ಇಸ್ತಾಂಬುಲ್‌ನಿಂದ ಮುಂಬೈ ಮತ್ತು ದೆಹಲಿಗೆ ತೆರಳಬೇಕಿದ್ದ ವಿಮಾನಗಳು ಕಾರಣಾಂತರಗಳಿಂದ ವಿಳಂಬವಾಗಿದ್ದವು. ಆ ಬಳಿಕ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನದಲ್ಲಿ ಸಂಚರಿಸಬೇಕಿದ್ದ 400 ಕ್ಕೂ ಹೆಚ್ಚು ಪ್ರಯಾಣಿಕರು ಇಸ್ತಾಂಬುಲ್ ಏರ್‌ಪೋರ್ಟ್ ನಲ್ಲಿ ಸಿಲುಕಿದ್ದು, ಊಟ, ವಸತಿ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ.
2 ಬಾರಿ ವಿಮಾನದ ಹಾರಾಟ ಸಮಯವನ್ನು ಮುಂದೂಡಲಾಯಿತು. ಬಳಿಕ ರದ್ದುಗೊಳಿಸಿ 12 ಗಂಟೆಯ ಬಳಿಕ ತೆರಳುವುದಾಗಿ ತಿಳಿಸಿದರು. ಆಯಾಸ ಮತ್ತು ಜ್ವರದ ಬಗ್ಗೆ ದೂರು ನೀಡಿದಾಗಲೂ ಸೂಕ್ತವಾಗಿ ಸ್ಪಂದಿಸಿಲ್ಲ. ಇಂಡಿಗೋ ಪ್ರತಿನಿಧಿಯನ್ನು ಸಂಪರ್ಕಿಸಿದರೂ ಪ್ರಯಾಣಿಕರಿಗೆ ಯಾವುದೇ ವಸತಿ, ಊಟದ ವ್ಯವಸ್ಥೆ ಮಾಡಿಲ್ಲ. ಚಳಿಯಲ್ಲಿ ನಡುಗುತ್ತ ವಿಮಾನ ನಿಲ್ದಾಣದಲ್ಲಿಯೇ ಕೆಲವು ಗಂಟೆಗಳಿಂದ ಸಿಲುಕಿದ್ದೇವೆ. ಜತೆಗೆ ಟರ್ಕಿಶ್ ಏರ್ಲೈನ್ಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಇಂಡಿಗೋ ಸಂಸ್ಥೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂದು ಪ್ರಯಾಣಿಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲು ತೋಡಿಕೊಂಡಿದಾರೆ.
ಇಸ್ತಾಂಬುಲ್ನಿಂದ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೊ ವಿಮಾನ ಡಿ. 12ರ ರಾತ್ರಿ 8.15ಕ್ಕೆ ಹೊರಬೇಕಿತ್ತು. ಬಳಿಕ ಅದನ್ನು 11 ಗಂಟೆಗೆ ಮುಂದೂಡಲಾಯಿತು. ಬಳಿಕ ಮರುದಿನ ರಾತ್ರಿ 10 ಗಂಟೆಗೆ ನಿಗದಿಪಡಿಸಲಾಯಿತು. ಇದರಿಂದ ಅಸಮಾಧಾನಗೊಂಡ ಪ್ರಯಾಣಿಕರು ವಿಮಾನ ಸಿಬ್ಬಂದಿ ವಿರುದ್ದ ಕಿಡಿಕಾರಿದ್ದಾರೆ.