ಬೆಂಗಳೂರು: ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತವಾಗಿ 20 ತಿಂಗಳಾಗಿದ್ದು ಈ ಅವಧಿಯಲ್ಲಿ ಒಟ್ಟು 438 ಕೋಟಿ ರೂ. ಟೋಲ್ ಸಂಗ್ರಹವಾಗಿದೆ.
ಬೆಂಗಳೂರು ಮತ್ತು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಒಟ್ಟು 3 ಟೋಲ್ ಸಂಗ್ರಹ ಕೇಂದ್ರಗಳಿವೆ. ಬೆಂಗಳೂರು ದಕ್ಷಿಣ ತಾಲೂಕಿನ ಕಣಿಮಿಣಿಕೆ ಮತ್ತು ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಕೇಂದ್ರದಲ್ಲಿ ಇದುವರೆಗೆ ಒಟ್ಟು 278.91 ಕೋಟಿ ಟೋಲ್ ಸಂಗ್ರಹವಾಗಿದ್ದರೆ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನ ಟೋಲ್ ಕೇಂದ್ರದಲ್ಲಿ 159.37 ಕೋಟಿ ಟೋಲ್ ಸಂಗ್ರಹವಾಗಿದೆ.
ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತವಾದ ಬಳಿಕ ಇದುವರೆಗೆ 3 ಬಾರಿ ಟೋಲ್ ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ ಕಾರಿಗೆ ಏಕಮುಖ ಸಂಚಾರಕ್ಕೆ 170 ಮತ್ತು ದ್ವಿಮುಖ ಸಂಚಾರಕ್ಕೆ 255 ರೂ ಟೋಲ್ ವಿಧಿಸಲಾಗುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಒಟ್ಟು 118 ಕಿ.ಮೀ. ಉದ್ದ ಇದೆ. ಬೆಂಗಳೂರಿನ ಕುಂಬಳಗೂಡಿನಿಂದ ಆರಂಭವಾಗುವ ಹೆದ್ದಾರಿ ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯದಲ್ಲಿ 58 ಕಿ.ಮೀ. ಮತ್ತು ಮೈಸೂರಿನಲ್ಲಿ 5 ಕಿ.ಮೀ. ಇದೆ.