ಸೋಷಿಯಲ್ ಮೀಡಿಯಾದ ದುರ್ಬಳಕೆ ದಿನೇ ದಿನೆ ಹೆಚ್ಚುತ್ತಿದೆ. ಆನ್ಲೈನ್ ಅನಾಹುತಗಳಿಗೆ ಅಮಾಯಕರಷ್ಟೇ ಅಲ್ಲ, ಬುದ್ದಿವಂತರೂ ಬಲಿಯಾಗ್ತಿದ್ದಾರೆ. ವಾಟ್ಸಾಪ್ ಫೇಸ್ಬುಕ್ನಲ್ಲಿ ಬರುವ ಲಿಂಕ್ಗಳು ಸೋಷಿಯಲ್ ಮೀಡಿಯಾ ಬಳಕೆದಾರರನ್ನ ಅಪಾಯಕ್ಕೆ ಸಿಲುಕಿಸುತ್ತಿವೆ. ಇಂಟರ್ನೆಟ್ ದುನಿಯಾದಲ್ಲಿ ವಂಚನೆ ಅನ್ನೋದು ವ್ಯಾಪಕವಾಗಿ ಹರಡಿಬಿಟ್ಟಿದೆ. ಅಪರಿಚಿತ ಲಿಂಕ್ ಮತ್ತು ಎಪಿಕೆ ಓಪನ್ ಮಾಡುವ ಮುನ್ನ ಬಹಳ ಎಚ್ಚರವಾಗಿರಬೇಕಾಗುತ್ತದೆ. ಹೀಗೆ ಯಾರೋ ಒಬ್ಬ ವ್ಯಕ್ತಿ ಅಪರಿಚಿತ ನಂಬರ್ ನಿಂದ ಬಂದ, ಗಿಫ್ಟ್ ಲಿಂಕ್ ಓಪನ್ ಮಾಡಿ 90 ಸಾವಿರ ಕಳೆದುಕೊಂಡಿದ್ದಾರೆ. ಈ ಘಟನೆ ಮಂಡ್ಯ ಜಿಲ್ಎಲ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಕಟ್ಟಡ ನಿರ್ಮಾಣದ ಮೇಸ್ತ್ರಿಯಾಗಿರುವ ಪ್ರದೀಪ್ ಎಂಬಾತ, ಬಹುಮಾನ ಬಂದಿದೆ ಎಂದುಕೊಂಡು ಫೋನ್ ಪೇ ಹೆಸರಿನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಈ ಲಿಂಕ್ ಓಪನ್ ಮಾಡುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣಕ್ಕೆ ಕನ್ನ ಬಿದ್ದಿದೆ. ಇದರಿಂದ ಕಂಗಾಲಾಆದ ಪ್ರದೀಪ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.