ಮಂಡ್ಯ : ಬೇಸಿಗೆ ಬೆಳೆ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಆತಂಕ ಎದುರಾಗಿದೆ. ಡ್ಯಾಂನಲ್ಲಿ ನೀರಿದ್ದರೂ ನಾಲೆಗೆ ಹರಿಸದೇ ಮೊಂಡಾಟ ಮಾಡುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹೇಮಾವತಿ ಡ್ಯಾಂ ಆಶ್ರಿತ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಂಡ್ಯ ರೈತರ ಸ್ಥಿತಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಒಂದು ತಿಂಗಳ ಹಿಂದೆಯೇ ಕೆ.ಆರ್.ಎಸ್ ಡ್ಯಾಂನಿಂದ ಬೆಳೆಗೆ ನೀರು ಹಾಯಿಸಿದ್ದು, ಈಗಾಗಲೇ ಭತ್ತ ನಾಟಿ ಕಾರ್ಯದಲ್ಲಿ ಅನ್ನದಾತರು ತೊಡಗಿದ್ದಾರೆ. ಆದರೆ, ಮತ್ತೊಂದೆಡೆ ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನಲ್ಲಿ ಭರದ ಛಾಯೆ ಆವರಿಸಿದೆ. ನೀರು ಹರಿಸುವ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರವನ್ನೂ ಕೈಗೊಂಡಿಲ್ಲ.
ಬೆಳಿಗ್ಗೆ ಎದ್ದರೆ ರಾಜಕೀಯ ಮಾತನಾಡುವ ಸಚಿವ ರಾಜಣ್ಣಗೆ ರೈತರ ಬಗ್ಗೆ ಚಿಂತೆ ಇಲ್ಲ. ಹೈಕಮಾಂಡ್ ನಾಯಕರ ಭೇಟಿಗೆ ದೆಹಲಿ ಪ್ರವಾಸ ಮಾಡೋ ಸಚಿವರೇ ನಮ್ಮ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಸಚಿವರ ವಿರುದ್ಧ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾಗಿ ವಾರದೊಳಗೆ ನಾಲೆಗೆ ನೀರು ಹರಿಸದಿದ್ದರೇ ಬೃಹತ್ ಹೋರಾಟಕ್ಕೆ ಸಿದ್ದತೆ ನಡೆಸಿದ್ದು, ನೀರಾವರಿ ಕಚೇರಿ ಜೊತೆಗೆ ಸಚಿವರಿಗೂ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.