ಚಿತ್ರದುರ್ಗ: ಪ್ರೀತಿ ಮಾಡು ಎಂದು ಯುವಕ ಕೊಟ್ಟ ಕಿರುಕುಳವನ್ನ ಸಹಿಸಲಾರದೆ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಳ್ಳಕೆರೆ ಮೂಲದ ಪ್ರೇಮಾ (18) ಮೃತ ವಿದ್ಯಾರ್ಥಿನಿ . ಈ ಘಟನೆ ಚಿತ್ರದುರ್ಗದ ಡಾನ್ ಬೊಸ್ಕೋ ಕಾಲೇಜಿನಲ್ಲಿ ನಡೆದಿದೆ. ಇನ್ನು ಮೃತ ವಿದ್ಯಾರ್ಥಿನಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್‌ಸಿ ಪದವಿ ಅಭ್ಯಾಸ ಮಾಡುತ್ತದ್ದಳು. ಆದರೆ, ಅವರ ಕುಟುಂಬ ಸದಸ್ಯರಿಗೆ ವಿದ್ಯಾರ್ಥಿನಿ ಪ್ರೇಮಾ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ಕಾಲೇಜು ಯುವತಿ ಪ್ರೇಮಾಗೆ ತರುಣ್ ಎಂಬ ಯುವಕ ತನ್ನನ್ನು ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಮಾಡಿದ್ದಾರೆ. ಪ್ರೀತಿ ಮಾಡು ಎಂದು ಅವನು ಕಾಡಿಸುತ್ತಿದ್ದ ಕಾರಣಕ್ಕೆ ಯುವತಿ ಪ್ರೇಮಾ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಯುವತಿ ಜತೆ ತರುಣ್ ಎಂಬ ಯುವಕ ವಾಟ್ಸಪ್ ಚಾಟ್ ಮಾಡಿರುವ ಮಾಹಿತಿಯನ್ನು ಆಕೆಯ ಪೋಷಕರು ಪೊಲೀಸರಿಗೆ ಹಂಚಿಕೊಂಡಿದ್ದಾರೆ. ಈ ಯುವಕನೇ ನಮ್ಮ ಮಗಳು ಪ್ರೇಮಾಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದಾನೆ ಎಂದು ಆರೋಪಿಸಿದ್ದಾರೆ.