ವಿದೇಶ

ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿ ಸಾವು

ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿ ಪಾಕಿಸ್ತಾನದಲ್ಲಿ ನಿಧನ ಹೊಂದಿದ್ದಾನೆ.

ಇಸ್ಲಾಮಾಬಾದ್‌: ಲಷ್ಕರ್‌ ಎ ತೋಯ್ಬಾ ಉಗ್ರ ಸಂಘಟನೆಯ ಉಪ ಮುಖ್ಯಸ್ಥ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿ ಪಾಕಿಸ್ತಾನದಲ್ಲಿ ನಿಧನ ಹೊಂದಿದ್ದಾನೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಿಯನ್ನು ಲಾಹೋರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನದಲ್ಲಿ ಸಕ್ರಿಯನಾಗಿದ್ದ ಮಕ್ಕಿಯನ್ನು ಪಾಕಿಸ್ತಾನ ಸರ್ಕಾರ 2019ರ ಮೇ ತಿಂಗಳಿನಲ್ಲಿ ಬಂಧಿಸಿ ಗೃಹ ಬಂಧನದಲ್ಲಿ ಇರಿಸಿತ್ತು. 2020 ರಲ್ಲಿ ಪಾಕಿಸ್ತಾನದ ಕೋರ್ಟ್‌ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ದೋಷಿಸಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇನ್ನು ಈತ 2008 ರ ನವೆಂಬರ್‌ 26 ರಂದು ಮುಂಬೈ ನಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲೂ ಭಾಗಿಯಾಗಿದ್ದ. 166 ಜನರು ಮೃತಪಟ್ಟಿದ್ದ ಈ ಭೀಕರ ದಾಳಿಗೆ ಹಣಕಾಸು ನೆರವು ಒದಗಿಸಿದ್ದ ಆರೋಪ ಈತನ ಮೇಲಿತ್ತು. ಮುಂಬೈ ದಾಳಿಯ ಹೊರತಾಗಿ ಡಿಸೆಂಬರ್ 22, 2000 ರಂದು ದೆಹಲಿಯ ಕೆಂಪು ಕೋಟೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಈತನ ಕೈವಾಡ ಇತ್ತು. ಇದಲ್ಲದೆ ಜನವರಿ 1, 2008 ರಂದು ರಾಂಪುರದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದಿದ್ದ ದಾಳಿ ಯಲ್ಲಿ 7 ಸೈನಿಕರು ಮತ್ತು ಒಬ್ಬ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯ ಹಿಂದೆ ಸಹ ಮಕ್ಕಿ ಕೈವಾಡ ಇತ್ತು. ಈ ಹಿನ್ನೆಲೆಯಲ್ಲಿ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಭಾರತ ಸರ್ಕಾರ ಮೋಸ್ಟ್‌ ವಾಂಟೆಡ್‌ ಉಗ್ರ ಎಂದು ಘೋಷಿಸಿತ್ತು.

ಇನ್ನು ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಸಹ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದ. ಆತನಿಗೆ ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.