ಮಂಡ್ಯ : ಹಾಸನ ಸಮಾವೇಶಕ್ಕೆ ತೆರಳಿದ್ದ KSRTC ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. K.R ಪೇಟೆ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಈ ಗ್ರಾಮದ 27ವರ್ಷದ ಪವನ್ ಮೃತಪಟ್ಟಿದ್ದಾನೆ.
ನಿನ್ನೆ ಹಾಸನದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶ ಮುಗಿಸಿ ಸಮಾವೇಶಕ್ಕೆ ತೆರಳಿದ್ದವರನ್ನ ವಾಪಸ್ ದುಡುಕನಳ್ಳಿ ಗ್ರಾಮಕ್ಕೆ ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ತಡರಾತ್ರಿ 10:30ರಲ್ಲಿ ಬೊಮ್ಮೇನಹಳ್ಳಿ ಗ್ರಾಮದ ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿಯಲ್ಲೇ ಘಟನೆ ನಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಪವನ್ ಮೃತಪಟ್ಟಿದ್ದಾನೆ. ಇನ್ನು ಘಟನಾ ಸಂಬಂಧ K.R.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.