ಚಿತ್ರದುರ್ಗ : ಅಳಿಯನೊಬ್ಬ ಪತ್ನಿಯ ಮೇಲಿನ ಕೋಪಕ್ಕೆ ಅತ್ತೆ ಮಾವನನ್ನೆ ಬರ್ಬರವಾಗಿ ಹತ್ಯೆ ಮಾಡದ ಘಟನೆಯೊಂದು ಬೊಮ್ಮಕ್ಕನಹಳ್ಳಿ ನಡೆದಿದೆ. ಜಮೀನಿನಲ್ಲಿ ದಂಪತಿ ಹತ್ಯೆ ಪ್ರಕರಣದಲ್ಲಿ ಕಳೆದ 38 ದಿನಗಳಿಂದ ನಾಪತ್ತೆಯಾಗಿದ್ದ ಅಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 19ರ ಬೊಮ್ಮಕ್ಕನಹಳ್ಳಿಯಲ್ಲಿ ಸಂಜೆ ಜಮೀನಿಗೆ ಹೋಗಿದ್ದ ಹನುಮಂತಪ್ಪ-ತಿಪ್ಪಮ್ಮ ದಂಪತಿಯನ್ನು ಸಂಜೆಗತ್ತಲಲ್ಲಿ ರಣಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಯಾವುದೋ ಕಾಡು ಪ್ರಾಣಿಯ ದಾಳಿ ಎಂದು ಅಂದಾಜಿಸಲಾಗಿತ್ತು. ಆದರೆ ಕೊಲೆಯಾದ ದಂಪತಿಯ ಪುತ್ರಿ ಹರ್ಷಿತಾಳ ಪತಿ ಮಂಜುನಾಥ್ ಎಂಬಾತ ನಾಪತ್ತೆ ಆಗಿದ್ದರಿಂದ ಆತನ ಮೇಲೆ ಅನುಮಾನಗೊಂಡು ತನಿಖೆ ನಡೆಸಿ ಮಂಜುನಾಥ್ ನ ಸಹೋದರ ರಘು, ತಂದೆ ಚಂದ್ರಪ್ಪ, ಸಂಬಂಧಿ ಮಲ್ಲಿಕಾರ್ಜುನ ಬಂಧಿಸಿದ್ದರು.
ಬಂಧಿತರ ವಿಚಾರಣೆ ವೇಳೆ ಹರ್ಷಿತಾ ತನ್ನ ಪತಿಯ ಜತೆ ಗಲಾಟೆ ಮಾಡಿಕೊಂಡು ಬಂದು ತವರು ಸೇರಿದ್ದಳು. ಇದರಿಂದ ಮಂಜುನಾಥ್ ಮತ್ತು ಇತರರು ಸೇರಿ ಜಮೀನಿಗೆ ತೆರಳಿದ್ದ ದಂಪತಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದರು.
ಏರ್ ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೊಬೈಲ್ ಟ್ರ್ಯಾಕ್ ಬಗ್ಗೆ ತಿಳಿದುಕೊಂಡಿದ್ದರಿಂದ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದ. ಮೊಬೈಲ್ ಟ್ರ್ಯಾಕ್ ಮಾಡಲು ಆಗದ ಕಾರಣ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸಾವಾಲಾಗಿ ಪರಿಣಮಿಸಿತ್ತು. ಎಸ್ಪಿ ರಂಜಿತ್ ಬಂಡಾರು 3 ತಂಡಗಳನ್ನು ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಪೊಲೀಸರು ಚಾಲಾಕಿ ಆರೋಪಿ ಮಂಜುನಾಥನನ್ನು ತೆಲಂಗಾಣದಿಂದ ಬಂಧಿಸಿ ತಂದಿದ್ದಾರೆ. ಮೊಬೈಲ್ ಬಳಸದೇ ಉಳಿದರೆ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸದ್ಯ, ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.