ಕರ್ನಾಟಕ

ಮಗು ಹುಟ್ಟಿ 2 ದಿನವಾದ್ರೂ ಮಗುವಿನ ಆರೋಗ್ಯದ ಬಗ್ಗೆ ಹೆತ್ತವರಿಗಿಲ್ವಾ ಸೂಕ್ತ ಮಾಹಿತಿ..?

ಮಗು ಹುಟ್ಟಿ 2 ದಿನವಾದ ಬಳಿಕವೂ ಮಂಗಳೂರಿನ ಆಸ್ಪತ್ರೆಯೊಂದು, ಹೆತ್ತವರಿಗೆ ಸೂಕ್ತ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಮಗುವಿನ ಪೋಷಕರು ದೂರು ಸಲ್ಲಿಸಿದ್ದರು.

ಮಂಗಳೂರಿನ ಲೇಡಿ ಗೋಶನ್ ಎಂಬ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಆಗಸ್ಟ್ 18ರಂದು ಭವ್ಯಾ ಎಂಬಾಕೆಗೆ ಹೆರಿಗೆ ಮಾಡಿ 2 ದಿನವಾದರೂ, ಸೂಕ್ತ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಮ್ಮ ಮಗುವಿಗೆ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ  ನ್ಯಾಯ ಕೊಡಿಸಿ ಎಂದು ಮಗುವಿನ ಪೋಷಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಪಾಣೆ ನಿವಾಸಿಯಾಗಿರುವ ಭವ್ಯಾಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ, ಮಗು ನಾರ್ಮಲ್ ಆಗಿದೆ ಎಂದು ತಿಳಿಸಿದ್ದರು. ಬಳಿಕ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ಹೇಳಿ, ಶಿಶುವನ್ನು NSUIಗೆ ದಾಖಲಿಸಿದರು. ಇದಾದ ಬಳಿಕ ಮಂಗಳವಾರ ಸಂಜೆ ಬಂದು ಮಗುವಿನ ಕಣ್ಣಿಗೆ ಸಮಸ್ಯೆ ಇದೆ ಎಂದು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ. ಈ ವಿಷಯ ತಿಳಿದ ಬಳಿಕ ಆಘಾತಗೊಂಡ ಕುಟುಂಬಸ್ಥರು, ಆಸ್ಪತ್ರೆ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು, ಭವ್ಯಾ ಸಹೋದರ ಸಂತೋಷ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 

ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆ ಮಂಡಳಿ, ಹೆರಿಗೆ ಬಳಿಕ ಜನಿಸಿದ ಮಗುವಿಗೆ ಯಾವುದೇ ತೊಂದರೆ ಇಲ್ಲದಿದ್ರೆ, ತಾಯಿ-ಮಗು ಫೋಟೋ ತೆಗೆಯುವ ವ್ಯವಸ್ಥೆ ಇದೆ. ಅಕಸ್ಮಾತ್ ಮಗುವಿಗೆ ಏನಾದರೂ ತೊಂದರೆ ಇದ್ದರೆ, NSUIಗೆ ಶಿಫ್ಟ್ ಮಾಡುವ ಮುನ್ನ ಹೆರಿಗೆ ವೇಳೆ ಹಾಕಲಾಗುವ ಟ್ಯಾಗ್ ಹಾಗೂ ಕೇಸ್ ಶೀಟ್ ಇಟ್ಟು ಫೋಟೋ ತೆಗೆಸುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸ್ಪಷ್ಟವಾಗಿವೆ ಎಂದು ಹೇಳಿದ್ದಾರೆ.