ಮೆಲ್ಬರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹೋರಾಟ ವ್ಯರ್ಥವಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 184 ರನ್ ಅಂತರದಿಂದ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
340 ರನ್ ಗುರಿ ಬೆನ್ನತ್ತಿದ ಭಾರತ ತಂಡ ಐದನೇ ದಿನದಾಟದ ಮೊದಲ ಸೆಷನ್ ನಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಎರಡನೇ ಸೆಷನ್ ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಜೋಡಿ ತಂಡಕ್ಕೆ ಆಸರೆಯಾಗಿ 88 ರನ್ ಜತೆಯಾಟವಾಡಿದರು. ಎರಡನೇ ಸೆಷನ್ ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದ ಟೀಂ ಇಂಡಿಯಾ ಕೊನೆಯ ಸೆಷನ್ ನಲ್ಲಿ 7 ವಿಕೆಟ್ ಕಳೆದುಕೊಂಡು ಸೋಲನುಭವಿಸಿದೆ. ಅಂತಿಮವಾಗಿ 79.1 ಓವರ್ ಗಳಲ್ಲಿ 155 ರನ್ ಗಳಿಸಿ ಆಲೌಟಾಗಿದೆ.
ಟೀಂ ಇಂಡಿಯಾದ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಯಶಸ್ವಿ ಜೈಸ್ವಾಲ್ 208 ಬಾಲ್ ಗಳಲ್ಲಿ 84 ರನ್ ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಟೀಂ ಇಂಡಿಯಾ ಪರ ರಿಷಭ್ ಪಂತ್ ಮಾತ್ರ 30 ರನ್ ಗಳಿಸಿದರು ಉಳಿದಂತೆ ಯಾವೊಬ್ಬ ಆಟಗಾರ ಸಹ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಮೊದಲಿ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ 1 ರನ್ ಗಳಿಸಿ ನಿರಾಶೆ ಮೂಡಿಸಿದರು. ಮೊದಲ ಇನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿದ್ದ ವಾಷಿಂಗ್ಟನ್ ಸುಂದರ್ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಅವರಿಗೆ ಬೆಂಬಲ ಸಿಗಲಿಲ್ಲ.
ಈ ಸೋಲಿನೊಂದಿಗೆ ಭಾರತ ತಂಡ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಸಿಡ್ನಿಯಲ್ಲಿ ನಡೆಯಲಿರುವ ಐದನೇ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಪ್ರದರ್ಶನದ ಮೇಲೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಅರ್ಹತೆ ನಿರ್ಧಾರವಾಗಲಿದೆ.