ಸಿಡ್ನಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಸಾಮಾಜಿಕ ಮಾಧ್ಯಮಗಳಿಂದಾಗಿ ಸಾಕಷ್ಟು ತೊಂದರೆಗಳು ಉಂಟಾಗ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರಲು ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮಕ್ಕಳು ಮಾನಸಿಕ ಖಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ. ಇದಕ್ಕಾಗಿ ಏಜ್ ವೆರಿಫಿಕೇಷನ್ ಸಿಸ್ಟಮ್ ಅನ್ನು ಪ್ರಯೋಗಿಸಲಾಗುತ್ತಿದೆ. ಮುಂದಿನ ವರ್ಷಾಂತ್ಯದೊಳಗೆ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ತಿಳಿಸಿದ್ಧಾರೆ.
ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ನಿರ್ದಿಷ್ಟವಾಗಿ ಹೆಣ್ಣು ಮಕ್ಕಳಿಗೆ ಅಶ್ಲೀಲ ವಿಚಾರಗಳು ಅಪಾಯ ಉಂಟುಮಾಡುತ್ತಿವೆ. ಸ್ತ್ರೀ ದ್ವೇಷದ ವಿಷಯಗಳು ಹುಡುಗರನ್ನು ಗುರಿಯಾಗಿಸುತ್ತಿವೆ. ಹೀಗಾಗಿ, ಈ ವರ್ಷ ಸಂಸತ್ತಿನಲ್ಲಿ ಹೊಸ ಕಾನೂನು ಜಾರಿಗೆ ತರಲು ಮಸೂದೆ ಮಂಡಿಸಲಾಗುವುದು. ಮಸೂದೆಯನ್ನು ಜನಪ್ರತಿನಿಧಿಗಳು ಅಂಗೀಕರಿಸಿದ 12 ತಿಂಗಳ ನಂತರ ಕಾನೂನು ಜಾರಿಗೆ ಬರಲಿವೆ ಎಂದು ಅಲ್ಬನೀಸ್ ತಿಳಿಸಿದ್ದಾರೆ.
ಕಳೆದ ವರ್ಷ ಫ್ರಾನ್ಸ್ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ ಪ್ರಸ್ತಾಪಿಸಿತ್ತು. ಆದರೆ ಬಳಕೆದಾರರು ಪೋಷಕರ ಒಪ್ಪಿಗೆಯೊಂದಿಗೆ ನಿಷೇಧ ತಪ್ಪಿಸಲು ಸಾಧ್ಯವಾಯಿತು. ಅಮೆರಿಕದಲ್ಲಿ 13 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಪ್ರವೇಶಿಸಲು ಪೋಷಕರ ಒಪ್ಪಿಗೆ ಪಡೆಯಬೇಕಿದೆ.