ನವದೆಹಲಿ: 2024ನೇ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು 2025 ನೇ ವರ್ಷ ಆರಂಭವಾಗಲಿದೆ. ಆದರೆ ಹೊಸ ವರ್ಷ ಜಗತ್ತಿಗೆ ಹರುಷವನ್ನು ಹೊತ್ತು ತರುವುದಕ್ಕಿಂತ ದುಃಖವನ್ನೇ ಹೊತ್ತು ತರಲಿದೆ, 2025 ಮೂರನೇ ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ಬಾಬಾ ವಾಂಗಾ ಭವಿಷ್ಯ ನುಡಿದಿದ್ದರು. ಈಗ ಈ ಭವಿಷ್ಯವಾಣಿಗೆ ಪೂರಕವಾದ ಘಟನೆ ಸಹ ನಡೆಸಿದೆ.
ಬಾಬಾ ವಾಂಗಾ ಪ್ರತಿ ವರ್ಷ ಜಗತ್ತಿನಾದ್ಯಂತ ಸಂಭವಿಸುವ ದೊಡ್ಡ ದುರಂತಗಳ ಕುರಿತು ಭವಿಷ್ಯವಾಣಿ ನುಡಿದಿದ್ದಾರೆ. ಅವರ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ. ಈಗ 2025ರ ಆರಂಭದಲ್ಲಿ ಅವರು ನುಡಿದಿರೋ ಭವಿಷ್ಯವಾಣಿಗಳ ಚರ್ಚೆ ಆರಂಭವಾಗಿದೆ. ಅದರಲ್ಲಿ ಬೆಚ್ಚಿ ಬೀಳಿಸುವಂತಿರುವ ಭವಿಷ್ಯವಾಣಿ 2025 ರಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಮಹಾಯುದ್ಧ. ಹೌದು ಬಾಬಾ ವಾಂಗಾ ಮುಂದಿನ ವರ್ಷ ಮಹಾಯುದ್ಧ ನಡೆಯುತ್ತೆ, ಪಶ್ಚಿಮ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಿನಾಶಕಾರಿ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು.
ಇನ್ನು ಯುದ್ಧದ ಆರಂಭಕ್ಕೂ ಸಿರಿಯಾಗೂ ಅವರು ಸಂಬಂಧ ಕಲ್ಪಿಸಿದ್ದರು. ಸಿರಿಯಾದ ಪತನವಾದ ಬಳಿಕ ಪಶ್ಚಿಮ ಮತ್ತು ಪೂರ್ವದ ನಡುವೆ ಮಹಾಯುದ್ಧ ನಡೆಯಲಿದೆ. ವಸಂತಕಾಲದಲ್ಲಿ ಪೂರ್ವದಲ್ಲಿ ಕಿಡಿ ಹೊತ್ತಿಕೊಳ್ಳಲಿದ್ದು, ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ. ಇದು ಪಶ್ಚಿಮವನ್ನು ನಾಶಪಡಿಸಲಿದೆ ಎಂದು ಬಾಬಾ ವಾಂಗಾ ಭವಿಷ್ಯ ನುಡಿದಿದ್ದರು. ವಾಂಗಾ ಭವಿಷ್ಯವಾಣಿಯ ಮೊದಲ ಭಾಗವಾಗಿ ಸಿರಿಯಾದಲ್ಲಿ ಬಂಡುಕೋರರು ಸರ್ಕಾರವನ್ನು ಪತನಗೊಳಿಸಿದ್ದಾರೆ. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ರಷ್ಯಾಗೆ ಪಲಾಯನ ಮಾಡಿದ್ದಾರೆ.
ಸಿರಿಯಾದಲ್ಲಿ ಸರ್ಕಾರ ಪತನವಾಗುತ್ತಿದ್ದಂತೆ ಐಸಿಸ್ ನೆಲೆಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸುತ್ತಿದೆ. ಇಸ್ರೇಲ್ ಸಹ ಸಿರಿಯಾ ಗಡಿಯಲ್ಲಿ ಸೇನೆ ನಿಯೋಜಿಸಿದೆ. ಮುಂದಿನ ದಿನಗಳಲ್ಲಿ ರಷ್ಯಾ ಸಹ ಸಿರಿಯಾದಲ್ಲಿ ಬಂಡುಕೋರರ ವಿರುದ್ಧ ದಾಳಿ ನಡೆಸುವ ಸಾಧ್ಯತೆಗಳು ಇವೆ. ಹಾಗಾಗಿ ಸಿರಿಯಾದಲ್ಲಿ ಯುದ್ಧ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇನ್ನು ಈಗಾಗಲೇ 3 ವರ್ಷದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಿಂದಾಗಿ ರಷ್ಯಾ ಮತ್ತು ನ್ಯಾಟೋ ರಾಷ್ಟ್ರಗಳ ನಡುವೆ ಸಂಘರ್ಷ ಹೆಚ್ಚಾಗಿದೆ. ಇನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧ ಸಹ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಿರಿಯಾದಲ್ಲಿ ಸರ್ಕಾರ ಪತನವಾಗಿರುವುದು ಮಧ್ಯಪ್ರಾಚ್ಯದ ಚಿತ್ರಣವನ್ನೇ ಬದಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.