ಕೋಲ್ಕತ್ತಾ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಬೆಳವಣಿಗೆಗಳ ನಡುವೆ ಬಾಂಗ್ಲಾ ಭಾರತದ ಗಡಿಯಲ್ಲಿ ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.
ಬಾಂಗ್ಲಾದೇಶ ಸೇನೆ ಟರ್ಕಿಯಿಂದ ಆಮದು ಮಾಡಿಕೊಂಡಿರುವ ಬೈರಕ್ತರ್ ಟಿಬಿ 2 ಡ್ರೋನ್ ಗಳನ್ನು ಭಾರತ ಗಡಿಯಲ್ಲಿ ನಿಯೋಜಿಸಿದೆ. ಈ ಡ್ರೋನ್ ಗಳನ್ನು ಗಡಿಯಲ್ಲಿ ಗುಪ್ತಚರ ಮಾಹಿತಿ ಸಂಗ್ರಹಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಟರ್ಕಿಯ ಅತ್ಯಾಧುನಿಕ ಡ್ರೋನ್ ಗಳನ್ನು ಭಾರತದ ಗಡಿಯಲ್ಲಿ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಅಲರ್ಟ್ ಆಗಿದೆ. ಬಾಂಗ್ಲಾದೇಶದ ಗಡಿಯಲ್ಲಿ ಕಾವಲು ಕಾಯುತ್ತಿರುವ ಬಿಎಸ್ ಎಫ್ ಯೋಧರು ಬಾಂಗ್ಲಾ ಸೇನೆಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದಾರೆ.
ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳವಾಗಿತ್ತು. ಇದೀಗ ಬಾಂಗ್ಲಾದೇಶದ ಬಳಿಕ ಡ್ರೋನ್ಗಳ ಹಾರಾಟ ತೀವ್ರಗೊಂಡಿದ್ದು, ಭಯೋತ್ಪಾದಕ ಗುಂಪುಗಳು ಮತ್ತು ಕಳ್ಳಸಾಗಣೆ ಜಾಲಗಳು ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆಯ ಲಾಭ ಪಡೆದು ಭಾರತದೊಳಗೆ ನುಸುಳಲು ಯತ್ನಿಸುತ್ತಿವೆ ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ಹೇಳಿದೆ.
ಬಾಂಗ್ಲಾದೇಶ ಸೇನೆಯು ಲ್ಯಾಂಡ್ಮೈನ್ ರಕ್ಷಣಾ ವಾಹನಗಳು, ರಾಕೆಟ್ ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಟರ್ಕಿಯೆಯಿಂದ ಖರೀದಿಸಿದೆ. ಉಕ್ರೇನ್ ಯುದ್ಧದ ನಂತರ, ಈ ಟರ್ಕಿಶ್ ಡ್ರೋನ್ಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಿದೆ.