ಢಾಕಾ: ಬಾಂಗ್ಲಾದೇಶದಲ್ಲಿ ದೇಶದ್ರೋಹ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಮತ್ತು ಅವರ ಅನುಯಾಯಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ನ. 25ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಪ್ರಮುಖ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ರನ್ನು ಬಂಧಿಸಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಬಾಂಗ್ಲಾದಲ್ಲಿ ಹಲವು ಹಿಂದೂ ಪ್ರಮುಖರು ಮತ್ತು ಇಸ್ಕಾನ್ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದರು. ಇನ್ನು ನವೆಂಬರ್ 26 ರಂದು ಚಿತ್ತಗಾಂಗ್‌ನ ಕೋರ್ಟ್ ಆವರಣದಲ್ಲಿ ನಡೆದ ಸಂಘರ್ಷದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ, ದಾಳಿಯಲ್ಲಿ ತಾನು ಗಂಭೀರವಾಗಿ ಗಾಯಗೊಂಡಿದ್ದೆ ಎಂದು ಬಾಂಗ್ಲಾದೇಶದ ಉದ್ಯಮಿ ಮತ್ತು ಹೆಫಾಜತ್-ಎ-ಇಸ್ಲಾಂ ಕಾರ್ಯಕರ್ತ ಇನಾಮುಲ್ ಹಕ್ ದೂರು ನೀಡಿದ್ದಾರೆ.
ಚಿತ್ತಗಾಂಗ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಭೂ ದಾಖಲಾತಿಗೆ ಸಂಬಂಧಪಟ್ಟ ಕೆಲಸ ಮುಗಿಸಿ ಮನೆಗೆ ಹಿಂತಿರುಗಿತ್ತಿದ್ದಾಗ ಚಿನ್ಮಯ್ ಕೃಷ್ಣ ದಾಸ್ ಅವರ ಅನುಯಾಯಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಪಂಜಾಬಿ ಕುರ್ತಾ ಮತ್ತು ಕ್ಯಾಪ್ ಧರಿಸಿದ್ದಕ್ಕಾಗಿ ತನ್ನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಉದ್ಯಮಿ ಹೇಳಿದ್ದು, ತನ್ನ ಬಲಗೈ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲಾಗಿದ್ದ ನಾನು ಚೇತರಿಸಿಕೊಂಡ ಬಳಿಕ ದೂರು ನೀಡುತ್ತಿದ್ದೇನೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇನಾಮುಲ್ ಹಕ್ ನೀಡಿದ ದೂರಿನ್ವಯ ಚಿನ್ಮಯ್ ಕೃಷ್ಣ ದಾಸ್ ಮತ್ತು 500 ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.