ಕೋಲ್ಕತ್ತಾ: ಗಾಯದ ಸಮಸ್ಯೆಯಿಂದ ಕಳೆದ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರವಿದ್ದ ವೇಗಿಇ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾಗೆ ವಾಪಸ್ಸಾಗಲು ಬಿಸಿಸಿಐ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಜತೆಗೆ ಡೆಡ್‌ಲೈನ್ ಅನ್ನೂ ನೀಡಿದೆ.
2023 ರ ಏಕದಿನ ವಿಶ್ವಕಪ್ ನಲ್ಲಿ ಗಾಯಗೊಂಡಿದ್ದ ಮೊಹಮ್ಮದ್ ಶಮಿ ನಂತರ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಚೇತರಿಸಿಕೊಂಡಿದ್ದರು. ಶಮಿ ಇತ್ತೀಚೆಗೆ ಬಂಗಾಳ ತಂಡದ ಪರ ರಣಜಿ ಕ್ರಿಕೆಟ್‌ನಲ್ಲೂ ಆಡಿಸಿದ್ದರು ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಆಡುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಶಮಿ ಯಾವಾಗ ಆಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ಸರಣಿಗೆ ಶಮಿಯನ್ನು ಆಯ್ಕೆ ಮಾಡಲು ಅವರು ಮತ್ತಷ್ಟು ಫಿಟ್ ಆಗಬೇಕಿದೆ. ಬಿಸಿಸಿಐನ ವೈದ್ಯಕೀಯ ತಂಡ ಶಮಿಯ ಗಾಯದ ಸಮಸ್ಯೆ ಬಗ್ಗೆ ನಿಗಾ ಇಟ್ಟಿದೆ. ಶಮಿ ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡದಲ್ಲಿ ಆಡುವಷ್ಟು ಫಿಟ್ ಆಗಿಲ್ಲ. ಹಾಗಾಗಿ ದೇಹದ ತೂಕ ಇಳಿಸಿಕೊಳ್ಳಬೇಕು ಮತ್ತು ಮತ್ತಷ್ಟು ಫಿಟ್ ಆಗಬೇಕು ಎಂದು ವೈದ್ಯಕೀಯ ತಂಡ ಶಮಿಗೆ ಸೂಚನೆ ನೀಡಿದೆ.
ಶಮಿಗೆ ಫಿಟ್ ಆಗುವಂತೆ ಸೂಚಿಸಿರುವ ಬಿಸಿಸಿಐ ಅದಕ್ಕಾಗಿ ಗಡುವನ್ನೂ ವಿಧಿಸಿದೆ. ಬಿಸಿಸಿಐ ವಿಧಿಸಿದ ಗಡುವಿನ ಒಳಗೆ ಶಮಿ ಮತ್ತೆ ಫಿಟ್ ಆದರೆ ಆಸ್ಟ್ರೇಲಿಯಾಗೆ ಪ್ರಯಾಣಿಸಬಹುದು ಅಥವಾ ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಬಹುದು. ಇಲ್ಲದಿದ್ದರೆ ಟೀಂ ಇಂಡಿಯಾಗೆ ವಾಪಸ್ಸಾಗಲು ಅವರು ಇನ್ನಷ್ಟು ದಿನ ಕಾಯಬೇಕಾಗುತ್ತೆ.