ವಿದೇಶ

ಬಿಟ್‌ಕಾಯಿನ್‌ ಸಾರ್ವಕಾಲಿಕ ದಾಖಲೆ… 1 ಲಕ್ಷ ಡಾಲರ್‌ ಗಡಿ ದಾಟಿದ ಕ್ರಿಪ್ಟೋ ಕರೆನ್ಸಿ

ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿ ವಲಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದ್ದು ಬಿಟ್‌ ಕಾಯಿನ್‌ ಇದೇ ಮೊದಲ ಬಾರಿಗೆ 1 ಲಕ್ಷ ಡಾಲರ್‌ ದಾಟುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ.

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಆಯ್ಕೆಯಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿ ವಲಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದ್ದು ಬಿಟ್‌ ಕಾಯಿನ್‌ ಇದೇ ಮೊದಲ ಬಾರಿಗೆ 1 ಲಕ್ಷ ಡಾಲರ್‌ ದಾಟುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ.

ಗುರುವಾರದ ವಹಿವಾಟಿನಲ್ಲಿ ಒಂದೇ ದಿನದಲ್ಲಿ ಬಿಟ್‌ಕಾಯಿನ್‌ ಮೌಲ್ಯ ಶೇ. 3.48 ರಷ್ಟು ಹೆಚ್ಚಾಗಿದೆ. ಗುರುವಾರ ಬಿಟ್‌ ಕಾಯಿನ್‌ ಮೌಲ್ಯ 3432 ಡಾಲರ್‌ ಹೆಚ್ಚಳ ಕಂಡು 1,02,188 ಡಾಲರ್‌ಗೆ ತಲುಪಿದೆ. ಈ ಮೂಲಕ ಇದೇ ಮೊದಲ ಬಾರಿಗೆ 1 ಲಕ್ಷದ ಗಡಿ ದಾಟಿದೆ. ಅದರಲ್ಲೂ ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಟ್‌ಕಾಯಿನ್‌ ಮೌಲ್ಯ ಏರಿಕೆ ಕಂಡಿತ್ತು. ಕಳೆದ ನಾಲ್ಕು ವಾರದಲ್ಲಿ ಬಿಟ್‌ಕಾಯಿನ್‌ ಮೌಲ್ಯ ಶೇ. 45 ರಷ್ಟು ಹೆಚ್ಚಳವಾಗಿದೆ. ಇದೇ ವೇಗದಲ್ಲಿ ಬಿಟ್‌ಕಾಯಿನ್‌ ಮೌಲ್ಯ ಹೆಚ್ಚುತ್ತಿದ್ದರೆ ಮುಂದಿನ ಕೆಲವೇ ವಾರದಲ್ಲಿ ಇದು 1 ಲಕ್ಷದ 20 ಸಾವಿರ ಡಾಲರ್‌ಗೆ ತಲುಪುವ ಸಾಧ್ಯತೆ ಇದೆ ಎಂದ ತಜ್ಞರು ಅಭಿಪ್ರಾಯಪಟ್ಟಿದಾರೆ.

ಡೊನಾಲ್ಡ್‌ ಟ್ರಂಪ್‌ ತಮ್ಮ ಪ್ರಚಾರದಲ್ಲಿ ಅಮೆರಿಕವನ್ನು ಕ್ರಿಪ್ಟೋ ಕರೆನ್ಸಿಯ ರಾಜಧಾನಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಜತೆಗೆ ಕ್ರಿಪ್ಟೋ ಕರೆನ್ಸಿಗೆ ಪೂರಕವಾದ ನೀತಿಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಗೆಲುವು ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸಿದ್ದು, ಅಪಾರ ಪ್ರಮಾಣದ ಹೂಡಿಕೆ ಕ್ರಿಪ್ಟೋ ಕರೆನ್ಸಿಗೆ ಹರಿದು ಬರುತ್ತಿದೆ.