ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದಕ್ಕೆ ದೂರು ದಾಖಲಿಸಿದ ದಲಿತ ಕುಟುಂಬದ ವಿರುದ್ಧವೇ ಸಮರ ಸಾರಲಾಗಿದೆ. ಆ ಕುಟುಂಬಕ್ಕೇ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿದೆ. ಆ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಊರಿನ ಅಂಗಡಿಗಳಲ್ಲಿ, ಸಾಮಾಗ್ರಿಗಳನ್ನೂ ನೀಡದಂತೆ ಸೂಚನೆ ನೀಡಲಾಗಿದೆ. ಓದುವ ಮಕ್ಕಳಿಗೆ ನೋಟ್ ಬುಕ್ ಸಹ ಕೊಳ್ಳಲಾಗದೇ ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಯುವಕನೊಬ್ಬ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ನಡೆಸಿದ್ದ. ನಿರಂತರ ಲೈಂಗಿಕ ಸಂಪರ್ಕದಿಂದ ಬಾಲಕಿ 5 ತಿಂಗಳ ಗರ್ಭಿಣಿಯಾಗಿದ್ದಳು. ಇದರಿಂದ ಎಚ್ಚೆತ್ತ ಬಾಲಕಿ ಪೋಷಕರು, ಯುವಕನೊಂದಿಗೆ ಮದುವೆ ಮಾತುಕತೆಗೆ ಕರೆದಿದ್ದರು. ಆದರೆ ಮದುವೆಗೆ ಯುವಕ ನಿರಾಕರಿಸಿದ್ದಕ್ಕೆ, ಪೊಲೀಸ್ ಠಾಣೆಗೆ ಅತ್ಯಾಚಾರ ಆರೋಪದಡಿ ದೂರು ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡಿರುವ ಸವರ್ಣೀಯ ಮುಖಂಡರು, ಆ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿಬಂದಿದೆ.