ನವದೆಹಲಿ: ಪ್ರಧಾನಿ ಮೋದಿ 3.0 2ನೇ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಸದನ ಉದ್ದೇಶಿಸಿ ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನ ಮಂಡಿಸಲಿದ್ದಾರೆ.
ಜನವರಿ 31ರಿಂದ ಆರಂಭವಾಗುವ ಬಜೆಟ್ ಅಧಿವೇಶನ ಏಪ್ರಿಲ್ 4ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನದ ಮೊದಲ ಹಂತವು ಫೆಬ್ರವರಿ 13 ರಂದು ಕೊನೆಗೊಳ್ಳಲಿದ್ದು, 2ನೇ ಹಂತದ ಬಜೆಟ್ ಅಧಿವೇಶನ ಮಾರ್ತ್ 10ರಿಂದ ಆರಂಭವಾಗಿ ಏಪ್ರಿಲ್ 4ಕ್ಕೆ ಮುಕ್ತಾಯವಾಗಲಿದೆ.
ಮೋದಿ ಸರ್ಕಾರದ 2ನೇ ಅವಧಿಗೆ 2019ರಲ್ಲಿ ಪೂರ್ಣಾವಧಿ ವಿತ್ತ ಸಚಿವೆಯಾಗಿ ನೇಮಕಗೊಂಡ ನಿರ್ಮಲಾ ಅವರು ಒಟ್ಟು 7 ಪೂರ್ಣಾವಧಿ ಹಾಗೂ 2024ರ ಫೆಬ್ರವರಿಯಲ್ಲಿ 1 ಮಧ್ಯಂತರ ಬಜೆಟ್ ಮಂಡಿಸಿದ್ದರು. ಇನ್ನು ಕೇವಲ 3 ಬಜೆಟ್ ಮಂಡಿಸಿದರೆ ಒಟ್ಟು 11 ಬಜೆಟ್ ಮಂಡಿಸಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಏನಿರಲಿದೆ?
- ವಕ್ಫ್ ತಿದ್ದುಪಡಿ ಸೇರಿದಂತೆ ಇತರ ಮೂರು ಹೊಸ ಕಾನೂನುಗಳ ಜಾರಿ ಸಾಧ್ಯತೆ
- ವಿಮಾನ ವಸ್ತುಗಳ ಮೇಲಿನ ಹಿತಾಸಕ್ತಿಗಳ ರಕ್ಷಣೆ ಮಸೂದೆ ಮಂಡನೆ ಸಾಧ್ಯತೆ
- ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, ವಲಸೆ ಮತ್ತು ವಿದೇಶಿಯ ಮಸೂದೆ ಜಾರಿ
- ಹಿಂದಿನ ಅಧಿವೇಶನದಿಂದ ಉಭಯ ಸದನಗಳಲ್ಲಿ ಇನ್ನೂ 10 ಮಸೂದೆಗಳು ಬಾಕಿ ಉಳಿದಿದ್ದು, ಅವುಗಳನ್ನೂ ಅಂಗೀಕರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.