ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನಲೆ ಬಳ್ಳಾರಿಗೆ ಗಾಲಿ ಜನಾರ್ಧನ ರೆಡ್ಡಿ ಎಂಟ್ರಿಯಾಗಿದ್ದಾರೆ. ಜನಾರ್ಧನ ರೆಡ್ಡಿ ಎಂಟ್ರಿ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.ಹಾಲುಮತ ಸಮಾಜದ ಸಭೆಯೊಂದಿಗೆ ಜನಾರ್ಧನರೆಡ್ಡಿ ರಾಜಕೀಯ ಚಟುವಟಿಕೆಯನ್ನ ಆರಂಭ ಮಾಡಿದ್ದಾರೆ. ಬಳ್ಳಾರಿಯ ಜನಾರ್ಧನರೆಡ್ಡಿ ನಿವಾಸದಲ್ಲಿ ಹಾಲುಮತ ಸಮಾಜದ ಮುಖಂಡರ ಜೊತೆ ಸಭೆ ನಡೆಸಲಾಗಿದೆ.
ಹಾಲುಮತ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಜನಾರ್ಧನ ರೆಡ್ಡಿ, ಹಾಲುಮತ ಮುಖಂಡರ ಸಭೆಯೊಂದಿಗೆ ರಾಜಕೀಯ ಚಟುವಟಿಕೆ ಆರಂಭ ಮಾಡಿದ್ದೇನೆ. ಸಿದ್ದರಾಮಯ್ಯಗೆ ಕಷ್ಟ ಕಾಲದಲ್ಲಿ ನಾನೇನು ಮಾಡಿದ್ದೆ ಅನ್ನೋದು ಗೊತ್ತು. ಸಿದ್ದರಾಮಯ್ಯ ಅವರ ಮನಸಾಕ್ಷಿಗೆ ಬಿಡುತ್ತೇನೆ. ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಸಿದ್ದರಾಮಯ್ಯ ರಾಜಕೀಯಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ.14 ವರ್ಷದಿಂದ ನಾನು ಬಳ್ಳಾರಿ ಜಿಲ್ಲೆಯಿಂದ ದೂರವಿದ್ದೆ. ಲಕ್ಷ ಕೋಟಿ ಲೂಟಿ ಮಾಡಿದೆ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ರು. ಆದ್ರೆ ನಾನು ಒಂದು ನೂರು ರೂಪಾಯಿಗೂ ಕೂಡ ಬೇರೆಯವರ ಜೇಬಿಗೆ ಕೈ ಹಾಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಳ್ಳಾರಿ ಜಿಲ್ಲೆಯನ್ನ ಸ್ವರ್ಗ ಮಾಡಬಹುದು. ಆದರೆ ಬಳ್ಳಾರಿ ಜಿಲ್ಲೆಯ ಐದು ಕಾಂಗ್ರೆಸ್ ಶಾಸಕರು ಐದು ದಿಕ್ಕಿನಲ್ಲಿದ್ದಾರೆ. ಕಮಿಷನ್ ಹಣಕ್ಕಾಗಿ ಇದುವರೆಗೆ ಗಣಿಭಾದಿತ ಪ್ರದೇಶಗಳನ್ನ ಅಭಿವೃದ್ಧಿ ಮಾಡ್ತಿಲ್ಲ. ಜೊತೆಗೆ ವಾಲ್ಮೀಕಿ ನಿಗಮದ ಹಣದಿಂದ ಈ ತುಕಾರಾಂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಶ್ರೀರಾಮುಲು ಸೋಲಲು ತುಕಾರಾಂ ಗೆಲ್ಲಲು ವಾಲ್ಮೀಕಿ ನಿಗಮಗದ ಹಣವೇ ಕಾರಣ ಎಂದು ಜನಾರ್ಧನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ದೇಶಕ್ಕಾಗಿ ಸಂಗೊಳ್ಳಿ ರಾಯಣ್ಣ ಹೋರಾಡಿ ಬ್ರಿಟಿಷರಿಂದ ಪ್ರಾಣ ಬಿಟ್ಟರು. ನಾನು ಬಳ್ಳಾರಿ ಜಿಲ್ಲೆಯನ್ನ ಅಭಿವೃದ್ಧಿಗೆ ಕನಸು ಕಂಡಿದ್ದೆ. ಸಂಗೊಳ್ಳಿ ರಾಯಣ್ಣರಿಗೆ ಬ್ರಿಟಿಷರು ತೊಂದರೆ ಕೊಟ್ಟಂತೆ ನನಗೆ ಸೋನಿಯಾ ಗಾಂಧಿ ತೊಂದರೆ ಕೊಟ್ಟು ನನ್ನನ್ನ ಜೈಲಿಗೆ ಕಳುಹಿಸಿದ್ರು ಎಂದು ಕಾಂಗ್ರೆಸ್ ಹೈಕಮಂಡ್ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.