ಕ್ಯಾಲಿಫೋರ್ನಿಯಾ: ಅಮೆರಿಕದ ಪಶ್ಚಿಮ ಕಡಲ ತೀರದಲ್ಲಿ ಫೆಸಿಫಿಕ್ ಸಾಗರದಲ್ಲಿ 7.0 ತೀವ್ರತೆಯ ಭೂಕಂಪನ ಸಂಭವಿಸಿದೆ.
ಗುರುವಾರ ಕ್ಯಾಲಿಫೋರ್ನಿಯಾದ ಹಂಬೋಲ್ಟ್ ಕೌಂಟಿಯ ಸಣ್ಣ ನಗರವಾದ ಫರ್ಂಡೇಲ್ನ ಪಶ್ಚಿಮಕ್ಕೆ 209 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದುವಿತ್ತು. ಬೆಳಗ್ಗೆ 10:44ಕ್ಕೆ ಭೂಕಂಪ ಸಂಭವಿಸಿದೆ ಭೂಕಂಪನದ ತೀವ್ರತೆಗೆ ತೀರ ಪ್ರದೇಶದಲ್ಲಿ ಭೂಮಿ ಕಂಪಿಸಿದೆ, ಕಟ್ಟಡಗಳೂ ಅಲುಗಾಡಿವೆ. ಭೂಕಂಪನ ಕೇಂದ್ರದಿಂದ 435 ಕಿ.ಮೀ. ದೂರದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲೂ ಪ್ರಬಲ ಭೂಕಂಪನದ ಅನುಭವವಾಗಿದೆ. ಹಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಇದರ ನಂತರ ಅನೇಕ ಸಣ್ಣ ಭೂಕಂಪಗಳು ಸಂಭವಿಸಿವೆ.
ಭೂಕಂಪನದ ಬಳಿಕ ಸಮುದ್ರದಲ್ಲಿ ಸುನಾಮಿ ಏಳುವ ಸಾಧ್ಯತೆ ಇತ್ತು, ಈ ಹಿನ್ನೆಲೆಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಸುನಾಮಿ ಅಲೆಗಳು ಏಳದ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಈ ಹಿಂದೆ 1964ರ ಮಾರ್ಚ್ 28ರಂದು ಅಲಾಸ್ಕಾದಲ್ಲಿ ಉಂಟಾದ ಪ್ರಬಲ ಭೂಕಂಪದಿಂದ ಸಂಭವಿಸಿದ ಸುನಾಮಿ ಕೆಲವೇ ಗಂಟೆಗಳ ನಂತರ ಕ್ರೆಸೆಂಟ್ ಸಿಟಿಗೆ ಅಪ್ಪಳಿಸಿತು. ಹಲವು ಮಂದಿ ಸಾವನ್ನಪ್ಪಿದ್ದರು, ಕಟ್ಟಡಗಳಿಗೆ ಹಾನಿ ಸಂಭವಿಸಿತ್ತು. ಜಪಾನ್ನಲ್ಲಿ 2011ರ ಭೂಕಂಪದಿಂದ ಉಂಟಾದ ಸುನಾಮಿ ಕ್ಯಾಲಿಫೋರ್ನಿಯಾ ಕರಾವಳಿಯುದ್ದಕ್ಕೂ ಸುಮಾರು 100 ಮಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿತ್ತು. ಈ ಪೈಕಿ ಹೆಚ್ಚಿನ ಹಾನಿ ಕ್ರೆಸೆಂಟ್ ಸಿಟಿಯಲ್ಲಿ ಆಗಿತ್ತು.