ದೇಶ

ಚಂದ್ರಯಾನ-4: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಚಂದ್ರಯಾನ- 3ರ ಲ್ಯಾಂಡರ್ ಮತ್ತು ರೋವರ್‌ನ ಯಶಸ್ವಿ ಲ್ಯಾಂಡಿಂಗ್ ಬಳಿಕ, ಈಗ ಚಂದ್ರಯಾನ- 4ರ ಮುಂದಿನ ಹಂತದ ಪ್ರಕ್ರಿಯೆ ಚುರುಕುಗೊಂಡಿದೆ.

ನವದೆಹಲಿ: ಚಂದ್ರಯಾನ 3 ಯಶಸ್ವಿಯಾದಾಗ ಇಡಿ ವಿಶ್ವವೇ ಭಾರತದ ಕಡೆ ತಿರುಗಿ ನೋಡಿತ್ತು. ಇಡಿ ಭಾರತವೇ ಸಂಭ್ರಮಿಸಿತ್ತು. ಈಗ ಚಂದ್ರಯಾನ -4 ಯೋಜನೆ ಸೇರಿದಂತೆ ಕೆಲವು ಬಾಹ್ಯಾಕಾಶ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಶುಕ್ರ ಗ್ರಹದ ಅಧ್ಯಯನ ಸಂಬಂಧ 'ವೀನಸ್‌ ಆರ್ಬಿಟರ್‌ ಮಿಷನ್‌' ಯೋಜನೆಗೂ ಒಪ್ಪಿಗೆ ನೀಡಿದೆ.

ಈ ಯೋಜನೆಯ ಒಟ್ಟು ವೆಚ್ಚ 2,104 ಕೋಟಿ ರೂ. ಚಂದ್ರನ ಮೇಲ್ಮೈನಿಂದ ಕಲ್ಲು-ಮಣ್ಣುನ್ನು ಭೂಮಿಗೆ ತಂದು ಅಭ್ಯಸಿಸುವುದು ಈ ಯೋಜನೆಯ ಉದ್ದೇಶವಾಗಿದೆ. 2040ರ ಹೊತ್ತಿಗೆ ಚಂದ್ರನ ಅಂಗಳದಲ್ಲಿ ಗಗನಯಾನಿಗಳನ್ನು ಇಳಿಸಿ, ಭೂಮಿಗೆ ಕರೆತರುವ ಉದ್ದೇಶಿತ ಯೋಜನೆಗೆ ಅಗತ್ಯವಿರುವ ತಂತ್ರಜ್ಞಾನಗಳ ಅಭಿವೃದ್ಧಿಯೂ ಚಂದ್ರಯಾನ-4 ಮಿಷನ್‌ನ ಭಾಗವಾಗಿದೆ. ಈ ಸಂಬಂಧ ಗಗನನೌಕೆಯ ಅಭಿವೃದ್ಧಿ ಮತ್ತು ಉಡಾವಣೆ ಪೂರ್ಣಗೊಳಿಸಲು ಇಸ್ರೋಗೆ 36 ತಿಂಗಳ ಸಮಯ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.