ಚನ್ನಪಟ್ಟಣ : ಕಾಂಗ್ರೆಸ್ ನಾಯಕರು ನನ್ನನ್ನು ನಿಂದನೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾನು ಅಭಿವೃದ್ದಿ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇನೆ. ಅವರಿಗೂ ನನಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಕೇಂದ್ರ ಸಚಿವರಾದ HD ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಚನ್ನಪಟ್ಟಣ - ರಾಮನಗರ ನಡುವೆ ಬೃಹತ್ ಕೈಗಾರಿಕೆ ಒಂದನ್ನು ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇರಿಸಿ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆಗಳನ್ನು ನೀಡಿದ್ದಾರೆ. ಎರಡೂ ಮಹತ್ವದ ಖಾತೆಗಳಾಗಿದ್ದು, ದೇವರ ಅನುಗ್ರಹ ಜನರ ಆಶೀರ್ವಾದದಿಂದ ಸಿಕ್ಕಿರುವ ಈ ಅವಕಾಶದಿಂದ ರಾಮನಗರ ಜಿಲ್ಲೆಯ ಜನರಿಗೆ ಏನಾದರೂ ಒಳ್ಳೆಯದು ಮಾಡುತ್ತೇನೆ ಎಂದು ಅವರು ಒತ್ತಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ನಾವು ಟಿಕೆಟ್ ಕೊಡುತ್ತೇವೆ ಎಂದೆವು. ಬಿಜೆಪಿ ಕೂಡ ಟಿಕೆಟ್ ಕೊಡಲು ಮುಂದಾಗಿತ್ತು. ಬಿಜೆಪಿ ವರಿಷ್ಠ ನಾಯಕರ ಮಾತಿಗೆ ತಲೆಬಾಗಿ ನಾವು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ನಿರ್ಧಾರ ಮಾಡಿದ್ದೆವು. ಆದರೆ, ಎಲ್ಲರ ಮಾತನ್ನು ಧಿಕ್ಕರಿಸಿ, ಸಿಪಿ ಯೋಗೇಶ್ವರ್ ಅವರು ಕಾಲಿನಲ್ಲಿ ಒದ್ದು ಅವರು ಕಾಂಗ್ರೆಸ್ ಸೇರಿಕೊಂಡರು. ಈಗ ನೋಡಿದರೆ ಹಾದಿಬೀದಿಯಲ್ಲಿ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದರು.
ನನ್ನ ಬಗ್ಗೆ, ನನ್ನ ತಂದೆಯ ಬಗ್ಗೆ ಬಹಳ ಕೀಳುಮಟ್ಟದ ಭಾಷೆ ಬಳಕೆ ಮಾಡಿಕೊಂಡು ಟೀಕೆ ಮಾಡುತ್ತಿದ್ದಾರೆ. ಅವರ ಪದ ಬಳಕೆಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಚನ್ನಪಟ್ಟಣ ಜನರೇ ತೀರ್ಪು ಕೊಡುತ್ತಾರೆ ಎಂದು ಅವರು ಹೇಳಿದರು. ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆಗಳು ಇವೆ ಎಂಬುದೇ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ. ಆದರೆ, ನಾನು ಏನು ಮಾಡಿದ್ದೇನೆ ಎಂಬುದು ಹಳ್ಳಿಗಳಿಗೆ ಹೋಗಿ ನೋಡಿದರೆ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಿವೇಶನಗಳನ್ನು ಮಾಡಿಕೊಳ್ಳಬೇಡಿ, ನಿಮಗೆ ನೀಡಲಾಗಿರುವ ನಿವೇಶನಗಳನ್ನು ಹಾಗೆಯೇ ಇಟ್ಟುಕೊಳ್ಳಿ. ಉಳಿದ ಗ್ರಾಮಸ್ಥರಿಗೂ ಹಕ್ಕುಪತ್ರ ಕೊಡಿಸಲಾಗುವುದು. ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು ಕೊಡಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.