ಯಾದಗಿರಿ: ಕರ್ನಾಟಕ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಶಿಕ್ಷಣದಲ್ಲಿ ಮೊದಲ ಸ್ಥಾನ ಬರುತ್ತದೆ ಎಂದು ನಾನು ಭರವಸೆಯ ಗ್ಯಾರಂಟಿ ಕೊಡುತ್ತೇನೆ ಹಾಗೂ ಮಕ್ಕಳಿಗೆ ಊಟ ಕೊಡುವುದು ನಮ್ಮ ಕರ್ತವ್ಯ, ಅವರಿಗೆ ಊಟ ಕೊಟ್ಟರೆ ದೇವರಿಗೆ ನೈವೇದ್ಯ ಇಟ್ಟಂತೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಯಾದಗಿರಿಯಲ್ಲಿ ಹೇಳಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಅಕ್ಷರ ದಾಸೋಹ- ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜೀಂ ಪ್ರೇಮ್ ಜೀ ಫೌಂಡೇಷನ್ ಇವರ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನಗಳು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಕೊಡುತ್ತಾ ಬಂದಿದ್ದೇವೆ. ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 76 ಸಾವಿರ ಶಾಲೆಗಳು ಬರುತ್ತವೆ. ಒಟ್ಟು 60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂದು ವಾರದಲ್ಲಿ 6 ದಿನ ಮೊಟ್ಟೆ ವಿತರಿಸಲು ಚಾಲನೆ ನೀಡಲಾಗಿದ್ದು, ರಾಜ್ಯದ 57 ಲಕ್ಷ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕೆ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರು ಕೈ ಜೋಡಿಸಿದ್ದಾರೆ ಅವರಿಗೆ ಸರ್ಕಾರದ ಪರವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಮೊದಲು ಸರ್ಕಾರ ಅಧಿಕಾರಕ್ಕೆ ಬಂದಾಗ ವಾರಕ್ಕೆ ಒಂದು ಬಾರಿ ಮೊಟ್ಟೆ ಕೊಡುತ್ತಿತ್ತು, ಆನಂತರ ಎರಡು ಬಾರಿ ಕೊಟ್ಟು ಇಂದು ವಾರಕ್ಕೆ ಆರು ದಿನ ಮೊಟ್ಟೆ ಕೊಡುತ್ತದೆ ಎಂದರು.ವಾರದಲ್ಲಿ ಅಜೀಂ ಫ್ರೇಮ್ ಜೀ ಫೌಂಡೇಶನ್ ವತಿಯಿಂದ 2, ಸರ್ಕಾರದ ವತಿಯಿಂದ 4 ಮೊಟ್ಟೆ ಸೇರಿದಂತೆ ಒಟ್ಟು 6 ಮೊಟ್ಟೆ ವಿತರಿಸುತ್ತವೆ ಎಂದರು.
ಸರಕಾರವು ಬಡವರ ಪರವಾಗಿ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಡುತ್ತಿರುವುದು ನಮ್ಮ ಹೆಮ್ಮೆ ಎಂದರು. ಅನ್ನಭಾಗ್ಯ ಯೋಜನೆಯಿಂದ ಬಡವರ ಹೊಟ್ಟೆ ತುಂಬಿಸುವ ಕಾರ್ಯವಾಗಿದೆ.
ಜೊತೆಗೆ ಮಕ್ಕಳ ಪೌಷ್ಠಿಕತೆಗೆ ಹೆಚ್ಚು ಒತ್ತು ಕೊಡುತ್ತಿದ್ದು, ಈ ಯೋಜನೆಗೆ ಸರ್ಕಾರವು ಮೂರು ವರ್ಷಕ್ಕೆ 1591 ಕೋಟಿ ರೂಗಳನ್ನು ಖರ್ಚು ಮಾಡುತ್ತಿದ್ದು ಇತಿಹಾಸವಾಗಿದೆ. ಹಾಗೂ 5 ಸಾವಿರ ಶಿಕ್ಷಕರ ನೇಮಕವನ್ನು ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.