ಕೊಪ್ಪಳ : ಕೇಂದ್ರ ಸಚಿವ ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೇವಲ ನನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯ ಬಿದ್ದರೆ ಮುಲಾಜಿಲ್ಲದೆ ಬಂಧಿಸುತ್ತೇವೆ. ಆದರೆ ಈಗ ಇನ್ನೂ ಬಂಧಿಸುವ ಸನ್ನಿವೇಶ ಬಂದಿಲ್ಲ. ಕುಮಾರಸ್ವಾಮಿಯವರು ಈಗಲೇ ಹೆದರಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯಪಾಲರು ಕುಮಾರಸ್ವಾಮಿಯವರ ವಿರುದ್ಧ ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳು ತನಿಖಾ ವರದಿ ನೀಡಿ, ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದಾರೆ. ಆದರೆ ರಾಜ್ಯಪಾಲರಿಂದ ಯಾವುದೇ ಕ್ರಮವಾಗದ ಹಿನ್ನೆಲೆ ಎಸ್ಐಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಲಿದೆ ಎಂದರು.
ಕುಮಾರಸ್ವಾಮಿಯವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಯನ್ನು ಬಿಡುಗಡೆ ಮಾಡಿರುವ ಬಗ್ಗೆಯೂ ಸಿಎಂ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರದ ಬಗ್ಗೆ ತನಗೆ ಮಾಹಿತಿಯಿಲ್ಲವೆಂದು ತಿಳಿಸಿದರು. ಜೊತೆಗೆ ಕುಮಾರಸ್ವಾಮಿಯವರದು ಎಂದಿಗೂ ಹಿಟ್ ಆ್ಯಂಡ್ ರನ್ ಕೇಸ್ ಎಂದರು.
ಅಭಿವೃದ್ಧಿ ಕೆಲಸದಲ್ಲಿ ರಾಜಕೀಯವಿಲ್ಲ:
ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸೇರಿದಂತೆ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಮಾಡದೇ , ಜಿಲ್ಲೆಯ ಜನರ ಹಾಗೂ ಇಲ್ಲಿನ ಅಭಿವೃದ್ಧಿ ಪರವಾಗಿಯೇ ನಮ್ಮ ನಿರ್ಣಯಗಳಿರುತ್ತವೆ. ಕೊಪ್ಪಳ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯಿದ್ದು, ಇಲ್ಲಿನ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇನೆ ಎಂದರು.
ಬೆಂಬಲ ಬೆಲೆ ಕುರಿತಂತೆ ಕೇಂದ್ರಕ್ಕೆ ಪತ್ರ:
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿ, ಹೆಸರುಕಾಳು ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.