ಕರ್ನಾಟಕ

ಸವದತ್ತಿ ಯಲ್ಲಮ್ಮ: ಪತ್ನಿ ಹೆಸರಲ್ಲಿ CM ಸಿದ್ದರಾಮಯ್ಯ ವಿಶೇಷ ಪೂಜೆ..!

ಅರ್ಚಕರು‌ ಸಿಎಂಗೆ ವೇತನ ಹೆಚ್ಚಿಸುವಂತೆ ದೇವಸ್ಥಾನದಲ್ಲೇ ಮನವಿ ನೀಡಿದ್ದಾರೆ. ಸಂಬಂಧಪಟ್ಟವರ ಜೊತೆಗೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮನವಿ ಕೊಡಲು ಬಂದವನಿಗೆ ಸಿಎಂ ಥೂ ಎಂದು ಹೇಳಿದ್ದಾರೆ. ಯಲ್ಲಮ್ಮ ದೇವಿ ದರ್ಶನ ಪಡೆದು ಹೊರ ಬರುವಾಗ ಈ ಘಟನೆ ನಡೆದಿದೆ.

ಬೆಳಗಾವಿ : ಇಂದು ಸಿಎಂ ಸಿದ್ದರಾಮಯ್ಯ ಅವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಇದೇ ವೇಳಡ ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಪಾರ್ವತಿ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ. ಧನಿಷ್ಠಾ ನಕ್ಷತ್ರ ಪಾರ್ವತಿ ಎಂದು ಅರ್ಚನೆ ಮಾಡಿಸಿದ್ದಾರೆ.

ಅರ್ಚಕರು‌ ಸಿಎಂಗೆ ವೇತನ ಹೆಚ್ಚಿಸುವಂತೆ  ದೇವಸ್ಥಾನದಲ್ಲೇ ಮನವಿ ನೀಡಿದ್ದಾರೆ. ಸಂಬಂಧಪಟ್ಟವರ ಜೊತೆಗೆ ಮಾತನಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮನವಿ ಕೊಡಲು ಬಂದವನಿಗೆ ಸಿಎಂ ಥೂ ಎಂದು ಹೇಳಿದ್ದಾರೆ. ಯಲ್ಲಮ್ಮ ದೇವಿ ದರ್ಶನ ಪಡೆದು ಹೊರ ಬರುವಾಗ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮೂರು ಜನ ಡಿಸಿಗಳು ಬದಲಾದ್ರೂ ಇನ್ನೂ ಕೆಲಸ ಆಗಿಲ್ಲ ಎಂದಿದ್ದಾನೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಥೂ ನೀನಾ ಇಲ್ಲಿ ಬಂದೂ ಇದನ್ನೇ ಮಾಡ್ತೇವಿ ಎಲ್ಲಿದ್ದೇವೆ ಗೊತ್ತಾಗಲ್ವಾ ಎಂದು ಗದರಿ ಮುಂದೆ ಸಾಗಿದ್ದಾರೆ.

ದೇವಿ ದರ್ಶನ ಬಳಿಕ  ಸಿಎಂ ಅತಿಥಿ ಗೃಹ ಉದ್ಘಾಟನೆ ಮಾಡಿದ್ದಾರೆ. ಏಳು ಕಟ್ಟಡಗಳನ್ನ ಉದ್ಘಾಟನೆ ಮಾಡಿದ್ದಾರೆ. ಮಾಧ್ಯಮದವರನ್ನ ಹೊರಗಿಟ್ಟು ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ,  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹುಬ್ಬಳ್ಳಿಯಿಂದ ಆಗಮಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಮಲಿಂಗ ರೆಡ್ಡಿ, ಎಚ್ ಕೆ ಪಾಟೀಲ್ ಸಿಎಂಗೆ ಸಾಥ್ ಕೊಟ್ಟಿದ್ದಾರೆ.

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸಿಎಂ ಭೇಟಿ ಹಿನ್ನೆಲೆ, ಸಿಎಂ ಸ್ವಾಗತಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿದ್ದಾರೆ. ಅರ್ಚಕ ನೀಡಿದ ನಿಂಬೆಹಣ್ಣು ಕೈಯಲ್ಲಿ ಹಿಡಿದು ಸತೀಶ್ ಜಾರಕಿಹೊಳಿ ಕುಳಿತಿದ್ದಾರೆ. ಸ್ಥಳೀಯ ಶಾಸಕರು ಸತೀಶ್ ಜಾರಕಿಹೊಳಿಗೆ ಸಾಥ್ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದಿದ್ದು, ಸಿಎಂ ಗರ್ಭಗುಡಿಗೆ ಎಡಗಾಲಿಟ್ಟು ಪ್ರವೇಶ ಮಾಡಿದ್ದಾರೆ. ಸಿಎಂ ಬರ್ತಿದ್ದಂತೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.  ದೇವಿಯ ಆರತಿ ಆಗುವವರೆಗೂ ದೇವ ಸನ್ನಿಧಾನದಲ್ಲಿ ನಿಂತು ದರ್ಶನ ಮಾಡಿದ್ದು, ಸಿಎಂ ಅವರು ತಾವೇ ಕುಂಕುಮ ಹಚ್ಚಿಕೊಂಡಿದ್ದಾರೆ. ಬಳಿಕ ಐದನೂರು ರೂಪಾಯಿಯನ್ನು ಆರತಿ ತಟ್ಟೆಗೆ ಹಾಕಿದ್ದಾರೆ.

ಇದೇ ವೇಳೆ ಅರ್ಚಕರು ಸಿಎಂ ಹಾಗೂ ಸಚಿವರಿಗೆ ನಾಗಮುದ್ರಿಕೆ ಇಟ್ಟು ಆಶೀರ್ವಾದ ಮಾಡಿದ್ದು, ಗರ್ಭಗುಡಿ ಬರ್ತಿದ್ದಂತೆ ಡಿಕೆ ಶಿವಕುಮಾರ್ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ನಂತರ ಸಿಎಂ, ಡಿಸಿಎಂ ಗೆ ಹಾರ ಹಾಕಿ ಶಾಲ ಹೋದಿಸಿ ದೇವಿ ಸನ್ನಿಧಾನದಲ್ಲಿ ಶಾಸಕ ವಿಶ್ವಾಸ ವೈದ್ಯ ಸನ್ಮಾನ ಮಾಡಿದ್ದಾರೆ.