ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿಯೊಬ್ಬ ಬಡ ರೋಗಿಯ ಸೋಗಿನಲ್ಲಿ ಬಂದು ಇತರ ರೋಗಿಗಳ ಪರ್ಸ್, ಹಣ ಕದ್ದು ಬಳಿಕ ಸಿಕ್ಕಿಬಿದ್ದಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕರ ಆಸ್ವತ್ರೆಯಲ್ಲಿ ನಡೆದಿದೆ.
ಹೌದು, ಮಧ್ಯರಾತ್ರಿ 1:30 ರ ವೇಳೆಗೆ ಇಡೀ ಆಸ್ವತ್ರೆ ಸೈಲೆಂಟ್ ಆಗಿದ್ರೂ ಇವನೊಬ್ಬ ನನಗೆ ಆ ನೋವು ಈ ನೋವು ಎಂದು ಹೇಳಿ ಕಂಡ ಕಂಡ ವಾರ್ಡಗಳ ಒಳಗಡೆ ಹೋಗುತ್ತಿದ್ದನು. ವೈದ್ಯರು ಚಿಕಿತ್ಸೆ ನೀಡಿದರೂ ಮನೆಗೆ ಹೋಗದೆ ರಾತ್ರಿ ವಾರ್ಡ್‌ಗಳಲ್ಲಿ ರೌಂಡ್ಸ್ ಹೊಡೆಯುತ್ತಿದ್ದವನನ್ನು ಹಿಂಬಾಲಿಸಿದಾಗ ಆತನ ಕಳ್ಳತನದ ಕೈಚಳಕ ಗೊತ್ತಾಗಿದೆ.
ಶಂಕರ್ ಎಂಬ ಆರೋಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕರ ಆಸ್ವತ್ರೆಗೆ ಕಳೆದ ರಾತ್ರಿ ಎದೆ ನೋವು ಅಂತ ಬಂದು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ. ನಂತರ ಆತ ಮನಗೆ ಹೋಗದೆ ನೇರವಾಗಿ ಆಸ್ಪತ್ರೆಯ ಮೊದಲನೆ ಮಹಡಿಗೆ ತೆರಳಿ ಅಲ್ಲಿ ವಾರ್ಡಗಳ ಒಳಗಡೆ ಹೋಗಿ ನಿದ್ದೆಗೆ ಜಾರಿರುವ ರೋಗಿಗಳ ಹಣ, ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳನ್ನು ಎಗರಿಸುವ ಯತ್ನ ಮಾಡಿದ್ದಾನೆ. ಈ ವೇಳೆ ರೋಗಿಯೊಬ್ಬರು ಎಚ್ಚೆತ್ತು ಯಾರು ನೀನು ಎಂದು ಕೇಳಿದಾಗ ಆತ, ನಾನು ಆಸ್ವತ್ರೆ ಸಿಬ್ಬಂದಿ, ಡಾಕ್ಟರ್ ಅಂತೆಲ್ಲ ಹೇಳಿ ಅಲ್ಲಿಂದ ಹೊರಗಡೆ ಬಂದಿದ್ದಾನೆ. ಇದರಿಂದ ಅನುಮಾನಗೊಂಡ ಜನರು ಆರೋಪಿಯನ್ನು ಹಿಂಬಾಲಿಸಿದಾಗ ಕಳ್ಳತನ ಮಾಡುತ್ತಿದ್ದುದು ತಿಳಿದು ಬಂದಿದೆ. ಕೂಡಲೆ ಆರೋಪಿಯನ್ನು ಜನರು ಹಿಡಿದು, ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರ ವಶಕ್ಕೆನೀಡಿದ್ದಾರೆ.