ಕರ್ನಾಟಕ

ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ಕಂಪ್ಲೆಂಟ್‌..!

ಬಾರ್ ಲೈಸೆನ್ಸ್ ಗೆ 20 ಲಕ್ಷ ಲಂಚದ ಬೇಡಿಕೆ ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತ ಅಬಕಾರಿ ಡಿಸಿ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಮಂಡ್ಯ ಅಬಕಾರಿ ಇಲಾಖೆಯ ಲಂಚದ ಕರ್ಮಕಾಂಡ ಬಟಾಬಯಲಾಗಿದೆ. ಮಂಡ್ಯದ ಮದ್ದೂರು ತಾಲೂಕಿನಲ್ಲಿ ಬಾರ್‌ & ರೆಸ್ಟೋರೆಂಟ್‌ ತೆಗೆಯಬೇಕಾದರೆ ಅಬಕಾರಿ ಡಿಸಿ, ಇನ್ಸ್‌ಪೆಕ್ಟ‌ರ್, ಕೇಸ್ ವರ್ಕರ್ ಎಲ್ಲರ ಜೇಬಿಗೂ ಲಕ್ಷ ಲಕ್ಷ ತುಂಬಬೇಕಂತೆ. ಆಗ ಮಾತ್ರ ಇಲ್ಲಿ ಬಾರ್‌ ಅಂಡ್ ರೆಸ್ಟೋರೆಂಟ್‌ಗೆ ತೆಗೆಯೋಕೆ ಪರ್ಮಿಶನ್‌ ಕೊಡ್ತಾರಂತೆ.

ಹೌದು, ಮದ್ದೂರಿನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ತೆರೆಯೋದಕ್ಕೆ ಅಂತ ಲೈಸೆನ್ಸ್‌ ಪಡೆಯಲು ಕಾಂಗ್ರೆಸ್‌ ಕಾರ್ಯಕರ್ತ ಪುನೀತ್‌ ಎಂಬಾತ ತನ್ನ ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು, ಮತ್ತು ನಂತರ ಅವರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದರು.

ದಾಖಲೆಗಳು ಸರಿಯಾಗಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ. ಬಳಿಕ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಕೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ಸಂಬಂಧ, ಪುನೀತ್ ಅವರು ಮಂಡ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.  ಕಾಂಗ್ರೆಸ್‌ ಕಾರ್ಯಕರ್ತ ಪುನೀತ್‌ ಆಡಿಯೋ, ವಿಡಿಯೋಗಳ ಸಮೇತ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ಕಂಪ್ಲೆಂಟ್ ನೀಡಿದ್ದಾರೆ. ಲಂಚ ನೀಡದೇ, ದಾಖಲೆಗಳು ಸರಿಯಾಗಿದ್ದರೂ, ಪರವಾನಗಿ ದೊರೆಯದಂತಹ ಸ್ಥಿತಿ ಉಂಟಾಗಿದೆ.  ಲೋಕಾಯುಕ್ತ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. 

ದೂರು ಬಂದರೆ ತನಿಖೆ ನಡೆಸುತ್ತೇವೆ: ಗೃಹ ಸಚಿವ ಪರಮೇಶ್ವರ್‌
ಮಂಡ್ಯ ಅಬಕಾರಿ ಇಲಾಖೆ ಲಂಚದ ವಿರುದ್ಧ ಲೋಕಾಯುಕ್ತಗೆ ದೂರು ಸಲ್ಲಿಕೆಯಾಗಿರುವ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದು, ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರಿಂದ ಲೋಕಾಯುಕ್ತದವರೇ ಆ ಬಗ್ಗೆ ಗಮನಹರಿಸುತ್ತಾರೆ. ಪೊಲೀಸ್ ಇಲಾಖೆಗೆ ದೂರು ಬಂದರೆ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಇಲಾಖೆಗೆ ದೂರು ಬಂದಿಲ್ಲ, ದೂರು ಬಂದರೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.