ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಈ ಹೇಳಿಕೆಗಳು ಹರಿದಾಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಫುಲ್ ಅಲರ್ಟ್ ಆಗಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು, ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ರು. ಇದರ ಬೆನ್ನಲ್ಲೇ ಎಸ್‌ಟಿಎಸ್ ಹಾಗೂ ಶಿವರಾಂ ಹೆಬ್ಬಾರ್ ಕೂಡ ಹೇಳಿಕೆಗೆ ಪುಷ್ಠಿ ನೀಡಿದ್ರು. ಇದರಿಂದ ಬಿಜೆಪಿ ನಾಯಕರಿಗೆ ದೊಡ್ಡ ಟೆನ್ಶನ್ ಶುರುವಾಗಿದೆ.
ಆಪರೇಷನ್ ಮಾಸ್ಟರ್ ಮೈಂಡ್ ಆಗಿರುವ ಸಿ.ಪಿ.ಯೋಗೇಶ್ವರ್‌ನೇ ಡಿ.ಕೆ. ಬ್ರದರ್ಸ್ ಆಪರೇಷನ್ ಮಾಡಿದ್ದಾರೆ. ಅಂಥದ್ರಲ್ಲಿ ಬೇರೆ ನಾಯಕರನ್ನು ಸೆಳೆಯೋಕೆ ಹೆಚ್ಚೇನು ಕಸರತ್ತು ಬೇಡ ಎನ್ನುವಂತಾಗಿದೆ. ಹೀಗಾಗಿ ಎಸ್.ಟಿ ಎಸ್ ಹಾಗೂ ಶಿವರಾಂ ಹೆಬ್ಬಾರ್ ಹೇಳಿಕೆಯಿಂದ ಬಿಜೆಪಿ ಅಲರ್ಟ್ ಆಗಿದೆ. ಒಂದೆಡೆ ಬಣ ರಾಜಕೀಯದಿಂದ ಪಕ್ಷದ ವಿರುದ್ಧ ಬೇಸತ್ತಿರುವ ಬಿಜೆಪಿ ನಾಯಕರು, ಮತ್ತೊಂದೆಡೆ ಕೆಲ ನಾಯಕರು ಕ್ಷೇತ್ರಕ್ಕೆ ಅನುದಾನ ಸಿಗದೇ ಕಂಗಾಲಾಗಿದ್ದಾರೆ. ಅಂತಹ ಶಾಸಕರನ್ನ ಕಾಂಗ್ರೆಸ್ ಸೆಳೆಯುವ ಪ್ರಯತ್ನ ಮಾಡುತ್ತಿದ್ಯಾ ಎಂಬ ಆತಂಕದಲ್ಲಿ ಕಮಲ ಪಾಳಯ ಮುಳುಗಿದೆ. ಇದೀಗ ಪಕ್ಷದ ಶಾಸಕರ ಚಟುವಟಿಕೆಗಳ ಕಡೆ ಗಮನ ಹರಿಸಲು ವರಿಷ್ಠರು ಸೂಚನೆ ನೀಡಿದ್ದಾರಾ ಎಂಬ ಅನುಮಾನವೂ ಶುರುವಾಗಿದೆ.