ಸ್ಪೆಷಲ್ ಸ್ಟೋರಿ

ಜಗತ್ತಿನಲ್ಲಿ ಎಲ್ಲೂ ಕಾಣದ ರಾಮ ಸೆಣಬು ಸಂಡೂರಿನ ಕಾಡಿನಲ್ಲಿ ಪತ್ತೆ: ಡಾ.ಸಮದ್ ಕೊಟ್ಟೂರು

ವಿಶ್ವದಲ್ಲಿ ಎಲ್ಲೂ ಕಾಣದ ಅಪರೂಪದ ಹಣ್ಣು ರಾಮ ಸೆಣಬು.. ಅಂದರೆ ಕ್ರೋಟಲೇರಿಯಾ ಸಂಡೂರೆನ್ಸಿಸ್. ಈ ಹಣ ಈಗ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಪತ್ತೆಯಾಗಿದೆ ಎಂಂದು ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಮಾಹಿತಿ ಹಂಚಿಕೊಂಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಸಂಡೂರು ತಾಲೂಕಿನ ಸ್ವಾಮಿಹಳ್ಳಿಯವರೆಗೆ 48 ಕಿಲೋ ಮೀಟರ್ ಉದ್ದಕ್ಕೆ, ಕದಿರಿನಾಕಾರದಲ್ಲಿ ಎರಡು ಪ್ರಧಾನ ಶ್ರೇಣಿಗಳಲ್ಲಿ ಹರಡಿಕೊಂಡಿರುವ ಸಂಡೂರಿನ ಪರ್ವತಗಳು  ಅಪಾರ ಸಂಪತ್ಫರಿತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಆದರೆ ಈ ಪರ್ವತ ಶ್ರೇಣಿ ಸಮುದ್ರಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತರಕ್ಕೆ ಇರುವ ಕಾರಣ ಇಲ್ಲಿ ಅಪರೂಪದ ಜೀವ ವೈವಿಧ್ಯತೆ ವಿಕಸನಗೊಂಡಿದೆ. ಅದರಲ್ಲೂ ಇಡೀ ಜಗತ್ತಿನಲ್ಲಿ ಎಲ್ಲೂ ಕಾಣದ ಸಸ್ಯ ಕ್ರೋಟಲೇರಿಯಾ ಸಂಡೂರೆನ್ಸಿಸ್  (Crotalaria sandoorensis) ಕೇವಲ ರಾಮಗಡ ಬೆಟ್ಟದಲ್ಲಿ ಮಾತ್ರ ಬೆಳೆಯುತ್ತಿದೆ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ತಿಳಿಸಿದ್ದಾರೆ. ಹೊಳಪಿನ ಸೂಕ್ಷ್ಮ ರೋಮಗಳಿಂದ ಕೂಡಿದ ಎಲೆ, ಹಳದಿ ಹೂವು, ಬುರುಡೆಯಂತೆ ಇರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದ್ದು, ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರು ಇರುವುದಿಲ್ಲ. ಆದ್ದರಿಂದ ರಾಮಗಡದಲ್ಲಿ ಮಾತ್ರ ಸಿಗುವ ಈ ಸೆಣಬಿನ ಗಿಡವನ್ನು “ರಾಮ ಸೆಣಬು ಎಂದು ತಾವು ನಾಮಕರಣ ಮಾಡಿರುತ್ತೇವೆ ಎಂದು ಡಾ.ಸಮದ್ ಕೊಟ್ಟೂರು ಮಾಹಿತಿ ನೀಡಿದರು.

ಕ್ರಿ.ಶ 1912 ನೇ ಇಸವಿಯಲ್ಲಿ ಈ ಗಿಡವನ್ನು ಜೆ.ಎಸ್.ಗ್ಯಾಂಬೆಲ್ ಎಂಬ ಯೂರೋಪಿನ ಸಸ್ಯ ಶಾಸ್ತ್ರಜ್ಞ ರಾಮಗಡದ ಪರ್ವತದೆಲ್ಲೆಡೆ ಇದನ್ನು ಪತ್ತೆ ಮಾಡಿದ್ದರು. ನಂತರ ಈ ಸಸ್ಯವನ್ನು ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಬೇಧ ಕೇವಲ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಿರ್ಧರಿಸಿ ಇದಕ್ಕೆ ಕ್ರೋಟಲೇರಿಯಾ ಸಂಡೂರೆನ್ಸಿಸ್ ಎಂದು ನಾಮಕರಣ ಮಾಡಿರುತ್ತಾರೆ.

ಆದರೆ ಈ ಸಸ್ಯದ ಕುರಿತು ವಿವರವಾದ ಅಧ್ಯಯನಗಳು ನಡೆದಿಲ್ಲ. 1980ರಲ್ಲಿ ಜೈನ್ ಎಂಬ ಸಸ್ಯ ಶಾಸ್ತ್ರಜ್ಞ ಇದರ ಅಧ್ಯಯನ ಮಾಡಿದ್ದರೆಂಬ ಮಾಹಿತಿ ಇದೆ. ಆದರೆ ತಾವು ಈ ಸಸ್ಯವನ್ನು ಕಳೆದ 14 ವರ್ಷಗಳಿಂದ ದಾಖಲಿಸುತ್ತಿದ್ದು,  ಇದನ್ನು ಸಂಡೂರು ತಾಲೂಕಿನ ಜೈಸಿಂಗಪುರದಿಂದ ರಾಮಗಡ ರಸ್ತೆಯುದ್ದಕ್ಕೂ ಹಾಗೂ ತಾಯಮ್ಮನಕೊಳ್ಳದಿಂದ ಯಶವಂತನಗರ ಕಣಿವೆಯವರೆಗೆ ಇರುವ ಪ್ರದೇಶದಲ್ಲಿ ದಾಖಲಿಸಲಾಗಿದೆ ಎಂದು ಡಾ.ಸಮದ್ ಕೊಟ್ಟೂರು ತಿಳಿಸಿದರು. ಚಳಿಗಾಲದ ಆರಂಭದಲ್ಲಿ ಹೂಬಿಟ್ಟು ಚಳಿಗಾಲದ ಅಂತ್ಯದ ವೇಳೆಗೆ ಬುರುಡೆಯಾಕಾರದ ಕಾಯಿಗಳು ಬಿಡುತ್ತವೆ. ನೆಲಕ್ಕೆ ಬಿದ್ದ ಬೀಜಗಳು ಮತ್ತೆ ಮಳೆಗಾಲದಲ್ಲಿ ಮೊಳಕೆಯೊಡೆದು ಬೆಳೆಯುತ್ತವೆ. ಕಾಡಿನ ಬೆಂಕಿ ಈ ಸಸ್ಯವನ್ನು ಹಾಗೂ ಬೀಜಗಳನ್ನು ಸುಟ್ಟು ನಾಶ ಮಾಡುವುದರಿಂದ ಹಾಗೂ ಮಿತಿಮೀರಿದ ಗಣಿಗಾರಿಕೆಯಿಂದ ಈ ಸಸ್ಯ ವಿನಾಶದ ಅಂಚಿಗೆ ತಲುಪಿದೆ.ಈ ಸಸ್ಯದ ಬೀಜಗಳನ್ನು ದೂರದ ಕೊಪ್ಪಳ ಜಿಲ್ಲೆಯ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದ್ದು, ಅಲ್ಲಿ ಬೆಳೆಯಲಿಲ್ಲ. ಇದಕ್ಕೆ ಸಮುದ್ರ ಮಟ್ಟದಿಂದ ಎತ್ತರ ಹಾಗೂ ಕಬ್ಬಿಣ-ಮ್ಯಾಂಗನೀಸ್ ಅದಿರು ಇರುವ ಮಣ್ಣು ಕಾರಣ ಇರಬಹುದು. ಹೀಗಾಗಿ ಈ ಸಸ್ಯ ಕೇವಲ ರಾಮಗಡದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಆದರೆ ಗಣಿಗಾರಿಕೆಯಿಂದ ಈ ಅಪರೂಪದ ಸಸ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ. ಆದ್ದರಿಂದ ಅಪರೂಪ ಈ ಸಸ್ಯದ ಕುರಿತು ಸುದೀರ್ಘ ಅಧ್ಯಯನ ಮಾಡುವುದು ಹಾಗೂ ಸಂಡೂರಿನ ಅಪರೂಪದ ಜೀವ ವೈವಿಧ್ಯತೆಯನ್ನು ಕಾಪಾಡಬೇಕಾದುದು ನಮ್ಮ ಜವಾಬ್ದಾರಿಯಾಗಿದೆ ಎಂದು ಡಾ.ಸಮದ್ ಕೊಟ್ಟೂರು ತಿಳಿಸಿದರು.