ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದು, ಕರೆಯೊಲೆ ಹಂಚುತ್ತಿದ್ದಾರೆ.. ತಮ್ಮ ಭಾವಿ ಪತ್ನಿ ಧನ್ಯತಾ ಜೊತೆಯಲ್ಲಿಯೇ ತೆರಳಿ ಆಪ್ತರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸುತ್ತಿದ್ದಾರೆ.. ಮದುವೆ ಸಿದ್ಧತೆಯ ಸಂಭ್ರಮದಲ್ಲಿಯೇ ಮೈಸೂರಿನ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿರುವ ಧನಂಜಯ್ ಮತ್ತು ಧನ್ಯತಾ ವಿಶೇಷ ಪೂಜೆ ಸಲ್ಲಿಸಿದ್ದಾರೆ.. ಇನ್ನು ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಡಾಲಿ ಧನಂಜಯ್, ಹಿರಿಯರಿಗೆ ಈಗಾಗಲೇ ಲಗ್ನಪತ್ರಿಕೆ ಕೊಡಲು ಶುರು ಮಾಡಿದ್ದೇನೆ.. ಇಂದು ಚಾಮುಂಡಿಬೆಟ್ಟದಲ್ಲಿ ಮದುವೆ ಪತ್ರಿಕೆಗೆ ಪೂಜೆ ಸಲ್ಲಿಸಿದ್ದೇನೆ, ಮೈಸೂರಿನಲ್ಲೇ ಮದುವೆ ನಡೆಯುತ್ತಿದೆ, ಎಲ್ಲರಿಗೂ ಲಗ್ನಪತ್ರಿಕೆ ಕೊಡುತ್ತೇನೆ, ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದಿದ್ದಾರೆ.. ಧನಂಜಯ್ ಮತ್ತು ಧನ್ಯತಾ ಮದುವೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ 2025 ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ.. ನೆಚ್ಚಿನ ನಟನ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಜೊತೆಗೆ ಇಂದು ಶ್ರೀ ಸುತ್ತೂರು ಕ್ಷೇತ್ರಕ್ಕೂ ಭೇಟಿ ನೀಡಿದ್ದು, ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1065 ನೆಯ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡರು. ಡಾಲಿ ಧನಂಜಯ ಮತ್ತು ಕುಟುಂಬಸ್ಥರು ಭಾಗವಹಿಸಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿ ನಂತರ ನಂದಿ ಧ್ವಜವನ್ನು ಹಿಡಿದು ಕುಣಿದರು.
