ವಿಜಯನಗರ: ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಮೊದಲ ಬಾರಿಗೆ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿತ್ತು. ಮಹಾ ದುರಂತದಿಂದ ಇದೇನಪ್ಪಾ ಹೀಗಾಯ್ತು ಎಂದು ಅಧಿಕಾರಿಗಳೆಲ್ಲಾ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು. ಇತ್ತಾ ಜಲಾಶಯದ ಒಡಲು ತುಂಬಿದೆ, ದೇವರು ಕೂಡ ಕಣ್ಣು ಬಿಟ್ಟಿದ್ದಾನೆ. ಈ ವರ್ಷ ನಿಶ್ಚಿಂತೆಯಿಂದ ಬೆಳೆ-ಬೇಸಾಯ ಮಾಡಬಹುದಲ್ಲಾ ಅಂದುಕೊಂಡಿದ್ದ ರೈತರ ಆಶಾಭಾವನೆಗೆ ದೊಡ್ಡ ಧಕ್ಕೆಯಾಗಿತ್ತು. ಇನ್ನೂ ಬೇರೆ ದಾರಿಯಿಲ್ಲ, ಡ್ಯಾಂ ಉಳಿಸಿಕೊಳ್ಳಲು ಜಲಾಶಯದ ಒಡಲನ್ನ ಖಾಲಿ ಮಾಡಲೇ ಬೇಕೆನ್ನುವ ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು. ಆದ್ರೆ, ತುಂಗಭದ್ರಾ ಜಲಾಶಯಕ್ಕೆ ಭಗೀರಥನಂತೆ ಬಂದ ಡ್ಯಾಂ ತಜ್ಞ ಕನ್ನಯ್ಯ ಒಂದು ರೀತಿಯ ಕಮಾಲ್ ಮಾಡಿದರು.
ತುಂಗಭದ್ರಾ ಜಲಾಶಕ್ಕೆ ಆಗಮಿಸಿದ್ದ ಕನ್ನಯ್ಯ ಟೀಂ, ಡ್ಯಾಂನ19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡುವ ಮೂಲಕ ಕನ್ನಯ್ಯ ದೇಶದ ಜಲಾಶಯಗಳ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದರು. ಮುಂದಾಗುತ್ತಿದ್ದ ಮಹಾ ದುರಂತವೊಂದಕ್ಕೆ ಪರಿಹಾರವನ್ನ ನೀಡಿ ಜನರಿಂದ ಪ್ರಶಂಸೆಗಳನ್ನ ಪಡೆದರು.
ಟಿಬಿ ಡ್ಯಾಂನಲ್ಲಿ 19ನೇ ಕ್ರಸ್ಟ್ ಗೇಟ್ಗೆ ಸ್ಟಾಪ್ ಲಾಗ್ ಅಳವಡಿಸುವ ಕಾರ್ಯ ಸಂಪೂರ್ಣ ಯಶಸ್ವಿಯಾಗಿದೆ. ಸತತ 3 ದಿನಗಳಿಂದ 36 ಗಂಟೆಗಳ ಕೆಲಸ ಮಾಡುವ ಮೂಲಕ ಕನ್ನಯ್ಯನವರು ಸಮಸ್ಯೆಗೊಂದು ಪರಿಹಾರವನ್ನ ನೀಡಿ, ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ಲಿಂಕ್ ಕಟ್ ಆಗಿದ್ದರಿಂದ 60 TMC ನೀರನ್ನ ಖಾಲಿ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದ್ರೆ ಕೇವಲ 35 TMC ನೀರು ಮಾತ್ರ ಖಾಲಿಯಾದ ನಂತರ ಸ್ಟಾಪ್ ಲಾಗ್ ಅಳವಡಿಕೆ ಕೆಲಸ ಆರಂಭಿಸಿದ ಡ್ಯಾಂ ತಜ್ಞ ಕನ್ನಯ್ಯ ಟೀಂ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಅನುಭವ ಹಾಗೂ ಬುದ್ಧಿವಂತಿಕೆಯ ಜೊತೆ ಕೆಲಸ ಆರಂಭಿಸಿದ ಕನ್ನಯ್ಯ, ಸ್ಟಾಪ್ ಲಾಗ್ ಗೇಟ್ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಜಲಾಶಯದಲ್ಲಿಯೇ ಸಾಕಷ್ಟು ನೀರು ಉಳಿದಿದೆ. ಇದು ರೈತರು. ನದಿ ಪಾತ್ರದ ಜನ, ಡ್ಯಾಂ ಸಿಬ್ಬಂದಿ ಸೇರಿ ಇಡೀ ಕರ್ನಾಟಕದ ಜನತೆಯ ಮೊಗದಲ್ಲಿ ಸಂತಸವನ್ನ ತಂದಿದೆ. ಅಲ್ಲದೇ ಈ ಬಾರಿ ಎರಡೂ ಬೆಳೆಗಗೆ ಟಿಬಿ ಜಲಾಶಯದಿಂದ ನೀರು ಕೊಡುವ ಸಾಧ್ಯತೆ ಇದೆ.
ಸದ್ಯ ಕನ್ನಡಿಗರ ಪಾಲಿನ ಭಗೀರಥ ಕನ್ನಯ್ಯ, ಜಲಾಶಯದಲ್ಲೇ ನೀರು ಉಳಿಯುವಂತೆ ಮಾಡಿ ರೈತರನ್ನ ನಿರಾಳರನ್ನಾಗಿಸಿದ್ದಾರೆ.