ಚಾಮರಾಜನಗರ : ಬೈಕ್ ನಲ್ಲಿ ಹೋಗುವಾಗ ವಿದ್ಯುತ್ ಪ್ರವಹಿಸಿ ನಾಗೇಂದ್ರ ಹಾಗೂ ಮಲ್ಲೇಶ್ ಎಂಬ ರೈತರಿಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆ ಬುಧವಾರ ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೂನಿಯರ್ ಎಂಜಿನಿಯರ್ ಹಾಗೂ ಲೈನ್ ಮ್ಯಾನ್ ಅನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ಆರೋಪದ ಹಿನ್ನೆಲೆ, ಎಂಜಿಯರ್ ಮರಿಸ್ವಾಮಿ ಹಾಗೂ ಲೈನ್ ಮ್ಯಾನ್ ಆನಂದ್ ಎಂಬವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಚಾಮರಾಜನಗರ ಸೆಸ್ಕ್ಇಇ ಪ್ರದೀಪ್ ತಿಳಿಸಿದ್ದಾರೆ.
ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಸಂಘದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸರಿಯಾಗಿ ವಿದ್ಯುತ್ ತಂತಿಗಳ ನಿರ್ವಹಣೆ ಮಾಡದೇ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಹರಿಹಾಯ್ದಿದ್ದರು.