ಕರ್ನಾಟಕ

ಚನ್ನಪಟ್ಟಣಕ್ಕೆ ಎನ್​​​​​​ಡಿಎ ಅಭ್ಯರ್ಥಿಯಾಗಲಿದ್ದಾರಾ ದೇವೇಗೌಡರ ಪುತ್ರಿ ಅನುಸೂಯ..?

ರಾಜ್ಯ ರಾಜಕಾರಣದಲ್ಲಿ ಹೊಸ ಹೊಸ ಬೆಳವಣಿಗೆಗಳಾಗುತ್ತಿವೆ. ನಿನ್ನೆ-ಮೊನ್ನೆವರೆಗೂ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬಹುತೇಕ ನಿಖಿಲ್ ಕುಮಾರಸ್ವಾಮಿಗೆ ಸಿಗುತ್ತೆ ಎಂಬ ಚರ್ಚೆ ಇತ್ತು. ಇದೀಗ ಆ ಚರ್ಚೆ ಬದಲಾಗಿದೆ. ದೇವೇಗೌಡರ ಪುತ್ರಿ ಅನುಸೂಯ ಅವರಿಗೆ ಟಿಕೆಟ್ ನೀಡಿ, ಸಿಪಿವೈ ಅವರ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಚನ್ನಪಟ್ಟಣ ಉಪಚುನಾವಣಾ ಕ್ಷೇತ್ರ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.ಬಿಜೆಪಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿ.ಪಿ.ಯೋಗೇಶ್ವರ್ ಅವರು, ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಬಹುತೇಕ ಕನ್ಫರ್ಮ್ ಎನ್ನುವಂತಾಗಿದೆ. ಇದರ ನಡುವೆ ಸಿಪಿವೈ ವಿರುದ್ಧ ಎನ್ ಡಿಎ ಅಭ್ಯರ್ಥಿಯಾಗಿ ದೇವೇಗೌಡರ ಪುತ್ರಿ ಹಾಗೂ ಸಂಸದ ಡಾ. ಮಂಜುನಾಥ್ ಅವರ ಪತ್ನಿ ಅನುಸೂಯರನ್ನು ಕಣಕ್ಕಿಳಿಸೋಕೆ, ಪ್ಲಾನ್ ನಡೆಯುತ್ತಿದೆ ಎನ್ನಲಾಗ್ತಿದೆ.

ಇಡೀ ಕುಟುಂಬವೇ ರಾಜಕಾರಣದಲ್ಲಿ ಮಿಂದೆದ್ದಿದ್ದರೂ, ರಾಜಕೀಯದಿಂದ ದೂರ ಉಳಿದಿರುವ ಅನುಸೂಯ ಅವರನ್ನು, ಸಿಪಿವೈ ವಿರುದ್ಧ ಕಣಕ್ಕಿಳಿಸಲು ತಂತ್ರ ನಡೆಯುತ್ತಿದೆ ಎನ್ನಲಾಗ್ತಿದೆ. ಡಾ. ಮಂಜುನಾಥ್ ಅವರ ರಾಜಕೀಯಕ್ಕೆ ಬುನಾದಿ ಹಾಕಿದ್ದ ಸಿಪಿವೈ ವಿರುದ್ಧವೇ, ಅನುಸೂಯ ಅವರು ಸ್ಪರ್ಧಿಸ್ತಾರೆ ಅಂದ್ರೆ ಗುರುವಿಗೆ ತಿರುಮಂತ್ರ ಹಾಕಿದಂತೆ. ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದ್ದರೂ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್ ಅವರು, ಡಾ. ಮಂಜುನಾಥ್ ಅವರ ಹೆಸರು ಸೂಚಿಸಿದ್ರು. ಏನೇ ಆದ್ರೂ ಶತಾಯ ಗತಾಯ ಮಂಜುನಾಥ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಧೈರ್ಯ ನೀಡಿದ್ರು. ಅದರಂತೆ ಡಾ. ಮಂಜುನಾಥ್ ಅವರ ಗೆಲುವಿಗಾಗಿ ಶ್ರಮಿಸಿ ಕೆಲಸ ಮಾಡಿದ್ರು. ದೇವೇಗೌಡರ ಅಳಿಯನ ರಾಜಕಾರಣಕ್ಕೆ ಮೊದಲ ಮೆಟ್ಟಿಲಾಗಿ ನಿಂತರು. ಅಂತಹ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧವೇ, ಮಂಜುನಾಥ್ ಅವರ ಪತ್ನಿ ಅನುಸೂಯ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸೋದು ಅಂದ್ರೆ ಏನು..? ದೇವೇಗೌಡರ ಕುಟುಂಬದ ಈ ರಾಜತಂತ್ರಕ್ಕೆ ಅನುಸೂಯ ಅವರು ಮಣೆ ಹಾಕ್ತಾರಾ..? ಪತಿಯ ರಾಜಕೀಯ ಬುನಾದಿಯಾ ಸಿಪಿವೈ ಅವರನ್ನೇ ತುಳಿಯುತ್ತಾರಾ ಎಂಬ ಚರ್ಚೆ ಎದುರಾಗಿದೆ.

ಒಂದು ವೇಳೆ ಕುಟುಂಬದ ತಂತ್ರಕ್ಕೆ ಮಣೆ ಹಾಕಿ ಅನುಸೂಯ ಅವರು ಚುನಾವಣೆಗೆ ನಿಂತರೆ, ರಾಜಕೀಯದಲ್ಲಿ ಇದೊಂದು ಹೊಸ ಬೆಳವಣಿಗೆಯಾಗೋದಂತೂ ಗ್ಯಾರಂಟಿ. ಇಬ್ಬರ ನಡುವಿನ ಪೈಪೋಟಿಯಿಂದ ಚನ್ನಪಟ್ಟಣ ಕ್ಷೇತ್ರ ನಿಗಿ ನಿಗಿ ಕೆಂಡವಾಗೋದ್ರಲ್ಲಿ ಡೌಟ್ ಇಲ್ಲ. 

ಇನ್ನು ಸಿಪಿವೈ ಕಾಂಗ್ರೆಸ್ ಸೇರ್ಪಡೆಯಾಗೋದು ಬಹುತೇಕ ಕನ್ಫರ್ಮ್ ಆಗಿದೆ. ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಮರ ಸಾರೋಕೆ, ಕಾಂಗ್ರೆಸ್ಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಶತ್ರುವಿನ ಶತ್ರು ಎನಗೆ ಮಿತ್ರ ಎಂಬಂತೆ, ಹೆಚ್ಡಿಕೆ ವಿಚಾರದಲ್ಲಿ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಒಟ್ಟಾಗಿ ನಿಲ್ಲೋದು ಗ್ಯಾರಂಟಿ. ಹೆಚ್ಡಿಕೆ ಎಂದರೆ ಉರಿದು ಬೀಳೋ ಈ ಇಬ್ಬರೂ ನಾಯಕರು, ಹೆಚ್ಡಿಕೆಯನ್ನು  ತೊಳೆದುಹಾಕೋ ಪಣ ತೊಟ್ಟು ನಿಂತಿದ್ದಾರೆ. ಒಂದು ವೇಳೆ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿವೈ ಸ್ಪರ್ಧೆ ಮಾಡಿದರೆ, ಹೆಚ್ಡಿಕೆ ಕುಟುಂಬವನ್ನ ಸೋಲಿಸೋದ್ರಲ್ಲಿ ಅನುಮಾನವಿಲ್ಲ. ಈಗಾಗ್ಲೇ ರಾಮನಗರ, ಮಾಗಡಿಯಲ್ಲಿ ಹೆಚ್ಡಿಕೆಯನ್ನ, ಮನೆಗೆ ಕಳಿಸಿದ್ದಾಗಿದೆ. ಇದೀಗ ಚನ್ನಪಟ್ಟಣ ಕ್ಷೇತ್ರದಿಂದಲೂ ಗೇಟ್ ಪಾಸ್ ನೀಡೋಕೆ ಎಲ್ಲಾ ತಂತ್ರವನ್ನೂ ಮಾಡಲಿದ್ದಾರೆ. ಇದರಿಂದ  ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣ ಚುನಾವಣೆ ಹೇಗಿರುತ್ತೆ ಅನ್ನೋ ಕುತೂಹಲ ಮೂಡಿಸಿದೆ.