ಉಡುಪಿ : ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪಿತ್ತುಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸ್ಥಳೀಯ ಮಾಹಿತಿದಾರರ ಮೂಲಕ ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಮ್ ಗೌಡ (44) ನನ್ನು ಎಎನ್‌ಎಫ್ ತಂಡ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಹತ್ಯೆ ನಡೆದಿದ್ದರ ಹಿಂದೆ ರೋಚಕ ಸ್ಟೋರಿನೇ ಅಡಗಿದೆ.
ಕಬ್ಬಿನಾಲೆಯ ಪಿತ್ತಬೈಲ್ನಲ್ಲಿರುವ ಮನೆಗೆ ವಿಕ್ರಂ ಹಾಗೂ ತಂಡ ಬಂದಿತ್ತು. ಪಿತ್ತಬೈಲ್ನಲ್ಲಿ ಮೂರು ಕುಟುಂಬಗಳು ವಾಸವಾಗಿವೆ. ಈ ಪೈಕಿ ಸುಧಕರ್ ಗೌಡ ಎಂಬುವವರ ಮನೆಗೆ ವಿಕ್ರಂ ಗೌಡ ಹಾಗೂ ತಂಡ ಬಂದಿತ್ತು. ದಿನಸಿ ಸಾಮಗ್ರಿ ಪಡೆಯುವುದಕ್ಕೆಂದು ಬಂದಿದ್ದರು.
ನಕ್ಸಲ್ ಮುಖಂಡ ವಿಕ್ರಮ್ ಗೌಡ ಪಡಿತರ ಸಾಮಗ್ರಿ ಮತ್ತು ಹಣವನ್ನು ಸಂಗ್ರಹಿಸಲು ಮೊದಲ ಮನೆಗೆ ಪ್ರವೇಶಿಸುತ್ತಿದ್ದಂತೆ, ಎನ್‌ಕೌಂಟರ್ ಕಾರ್ಯಗತಗೊಳಿಸಲಾಯಿತು. ಸುಧಕರ್ ಗೌಡ ಮನೆಗೆ ವಿಕ್ರಂ ಗೌಡ ಬರಬಹುದು ಎಂಬ ಸುಳಿವಿದ್ದ ಎಎನ್ಎಫ್ ಸಿಬ್ಬಂದಿ ಮೂರು ದಿನಗಳ ಹಿಂದೆಯೇ ಸುಧಕರ್ ಕುಟುಂಬವನ್ನು ಅಲ್ಲಿಂದ ಖಾಲಿ ಮಾಡಿಸಿದ್ದರು. ಬಳಿಕ ಎಎನ್ಎಫ್ ಸಿಬ್ಬಂದಿಯೇ ಮನೆಯಲ್ಲಿ ತಂಗಿದ್ದರು. ಆದರೆ, ಮನೆಯೊಳಗೆ ಎಎನ್ಎಫ್ ಪಡೆ ಇರುವುದರ ಸಣ್ಣ ಸುಳಿವು ಕೂಡ ಇಲ್ಲದ ವಿಕ್ರಂ ಗೌಡ ಮನೆಯೊಳ ಹೊಕ್ಕಿದ್ದಾನೆ. ತಕ್ಷಣವೇ ಎಎನ್ಎಫ್ ಸಿಬ್ಬಂದಿ ಎದುರಾಗಿದ್ದಾರೆ. ಕೂಡಲೇ ವಿಕ್ರಂ ಗೌಡ ತಪ್ಪಿಸಿಕೊಂಡು ಓಡಿಹೋಗಲು ಅಂಗಳಕ್ಕೆ ಓಡಿ ಬಂದಿದ್ದ. ಆದರೆ ಅಂಗಳದಲ್ಲೇ ವಿಕ್ರಂ ಗೌಡನನ್ನು ಎಎನ್ಎಫ್ ಸಿಬ್ಬಂದಿ ಸುತ್ತುವರೆದಿದ್ದರು.
ವಿಕ್ರಂ ಗೌಡನನ್ನು ಸುತ್ತುವರೆದ ಎಎನ್ಎಫ್ ಸಿಬ್ಬಂದಿ, ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಆತ ಶರರಣಾಗದೇ ಇದ್ದಾಗ ವಿಕ್ರಂ ಗೌಡನಿಗೆ ಗುಂಡು ಹೊಡೆದಿದ್ದಾರೆ.