ಸ್ಪೆಷಲ್ ಸ್ಟೋರಿ

ಎಚ್ಚರ..ಕರೆ ಮಾಡ್ತಾರೆ..ಹೆದರಿಸ್ತಾರೆ..ಬೆತ್ತಲು ಮಾಡ್ತಾರೆ…ಹಣ ಕೀಳ್ತಾರೆ…!

ಭಾರತದಲ್ಲಿ ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಲಕ್ಷ ಲಕ್ಷ ರೂಪಾಯಿ, ಕೋಟಿ ರೂಪಾಯಿಗಳನ್ನ ಕಳೆದುಕೊಂಡ ಕಣ್ಣೀರ ಕತೆಗಳು, ವಿವಸ್ತ್ರಗೊಳಿಸಿ ವಿಚಾರಣೆ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಸೇರಿದಂತೆ ಹಲವು ಆತಂಕಕಾರಿ ಘಟನೆಗಳು ವರದಿಯಾಗುತ್ತಿವೆ

ಯೂ ಆರ್ ಅಂಡರ್ ಡಿಜಿಟಲ್ ಅರೆಸ್ಟ್

ಎಚ್ಚರ…ಇದೊಂದು ಹೊಸ ವಂಚನೆ

ಅಮಾಯಕರೇ ಟಾರ್ಗೆಟ್..ಮುಂದಿನ ಬೇಟೆ ನೀವೇ ಇರಬಹುದು

ನಿಮ್ಮದೊಂದು ಪಾರ್ಸೆಲ್ ಇದೆ.. ಬೆಂಗಳೂರಿನಿಂದ ಮುಂಬೈಗೆ ಕಳಿಸಬೇಕಿದೆ. ಬಟ್ ಅದು ಡೆಲಿವರಿ ಆಗಿಲ್ಲ..ಕಸ್ಟಮ್ಸ್ ನಲ್ಲಿ ಸಿಕ್ಕಿಬಿದ್ದಿದೆ..ಅದರೊಳಗೆ ಡ್ರಗ್ಸ್ ಗಾಂಜಾ ಎಲ್ಲಾ ಇದೆ..ಪಾರ್ಸೆಲ್ ಮೇಲೆ ನಿಮ್ಮ ನಂಬರ್ ಇತ್ತು..ಹೀಗಾಗಿ ಕರೆ ಮಾಡಿದ್ದೀವಿ.. ಪೊಲೀಸ್ರಿಗೂ ಸುದ್ದಿ ಮುಟ್ಟಿಸಲಾಗಿದೆ.. ಏನಂತ್ತೀರಾ…ಅಂತ ಬರಬಹುದು ಒಂದು ಫೋನ್ ಕಾಲ್… 

ಯೆಸ್.. ಈ ರೀತಿ ಬರುವ ಒಂದು ಕರೆ ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡಿ ಸುಲಿಗೆ ಮಾಡೋಕೆ ತಂಡವೊಂದು ರೆಡಿಯಾಗಿದೆ ಅನ್ನೋ ಸೂಚನೆ ಕೊಡುತ್ತೆ. ಹೌದು.. ಭಾರತದಲ್ಲಿ ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದೆ. ಲಕ್ಷ ಲಕ್ಷ ರೂಪಾಯಿ, ಕೋಟಿ ರೂಪಾಯಿಗಳನ್ನ ಕಳೆದುಕೊಂಡ ಕಣ್ಣೀರ ಕತೆಗಳು, ವಿವಸ್ತ್ರಗೊಳಿಸಿ ವಿಚಾರಣೆ, ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಸೇರಿದಂತೆ ಹಲವು ಆತಂಕಕಾರಿ ಘಟನೆಗಳು ವರದಿಯಾಗುತ್ತಿವೆ…. 

ಇದೀಗ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟ್ ನೀಡಿದ ವರದಿ ಹಲವರ ನಿದ್ದೆಗೆಡಿಸಿದೆ. ಕಾರಣ 2024ರ ಆರಂಭಿಕ 3 ತಿಂಗಳಲ್ಲಿ ಭಾರತ ಡಿಜಿಟಲ್ ಅರೆಸ್ಟ್ನಿಂದ 120 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಅಂತ ವರದಿ ನೀಡಿದೆ.. ಈ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 7.4 ಲಕ್ಷ ಸೈಬರ್ ಕ್ರೈಂ ದೂರುಗಳು ದಾಖಲಾಗಿವೆ. ಈ ಪೈಕಿ ಶೇಕಡಾ 46ರಷ್ಟು ದೂರುಗಳು ಡಿಜಿಟಲ್ ಅರೆಸ್ಟ್ ಕುರಿತಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತು ಪ್ರಧಾನಿ ಮೋದಿ ಡಿಜಿಟಲ್ ಅರೆಸ್ಟ್ನಿಂದ ಪಾರಾಗಲು 3 ಸೂತ್ರ ಅನುಸರಿಸೋಕೆ ಸಲಹೆ ನೀಡಿದ್ದಾರೆ.

ಈ ವಂಚನೆ ಮೂಲ ಮಯನ್ಮಾರ್, ಲಾವೋಸ್, ಕಾಂಬೋಡಿಯಾ ಎಂದು ಸೈಬರ್ ಕ್ರೈಂ ವರದಿ ಹೇಳುತ್ತಿದೆ. ಆದರೆ ಭಾರತೀಯರನ್ನು ಟಾರ್ಗೆಟ್ ಮಾಡಿ ಡಿಜಿಟಲ್ ಅರೆಸ್ಟ್ ಮೂಲಕ ಮೋಸದ ಜಾಲಕ್ಕೆ ಸಿಲುಕಿಸಿ ಹಣ ವಂಚನೆ ಮಾಡಲಾಗುತ್ತಿದೆ.

ಏನಿದು ಡಿಜಿಟಲ್ ಅರೆಸ್ಟ್..?

 ಹೆಸರೇ ಹೇಳುವಂತೆ ಇದು ಡಿಜಿಟಲ್ ಮೂಲಕ ಅರೆಸ್ಟ್ ಮಾಡುವ ಅಥವಾ ಮೋಸದ ಜಾಲಕ್ಕೆ ಸಿಲುಕಿಸುವ ವಂಚನೆ. ಆರಂಭದಲ್ಲಿ ಹೆಚ್ಚಾಗಿ ಪಾರ್ಸೆಲ್, ಕೊರಿಯರ್ ಕಂಪನಿಗಳ ಸೋಗಿನಲ್ಲಿ ಕರೆಯೊಂದು ಬರಲಿದೆ. ನಿಮ್ಮ ಹೆಸರಲ್ಲಿ ಯಾರೋ ಪಾರ್ಸೆಲ್ ಕಳುಹಿಸಿದ್ದಾರೆ. ಅಥವಾ ನಿಮ್ಮ ಹೆಸರಿನಿಂದ ಥಾಯ್ಲೆಂಡ್ಗೆ, ಮಲೇಷಿಯಾಗೆ ಪಾರ್ಲೆಸ್ ಕಳುಹಿಸಲಾಗಿದೆ. ಈ ಪಾರ್ಸೆಲ್ನಲ್ಲಿ ಮಾದಕ ವಸ್ತು, ಮೊಬೈಲ್ ಫೋನ್, ಲ್ಯಾಪ್ಟಾಪ್ ಇನ್ನಿತರ ವಸ್ತುಗಳು ಇವೆ. ಡ್ರಗ್ಸ್ ಜಾಲ ನಿಮ್ಮ ಹೆಸರಿನಲ್ಲಿ ಈ ಕೃತ್ಯ ಮಾಡಿದೆ. ಈ ಕುರಿತು ನೀವು ದೂರು ದಾಖಲಿಸಿ ಅಥವಾ ನಿಮಗೆ  ನರ್ಕೋಟಿಕ್ಸ್ ವಿಭಾಗ ಅಧಿಕಾರಿಗಳು ಕರೆ ಮಾಡಲಿದ್ದಾರೆ ಅನ್ನೋ ಸಂದೇಶ ನೀಡ್ತಾರೆ. ಬಳಿಕ ಕೋರಿಯರ್ ಕಂಪನಿ ನೀಡಿದ ನಂಬರ್ಗೆ ವ್ಯಾಟ್ಸ್ಆ್ಯಪ್ ಕರೆ ಮಾಡುವಂತೆ ಮಾಡ್ತಾರೆ, ಅಥವಾ ಅವರೇ ಮಾಡ್ತಾರೆ. ಪೊಲೀಸರು, ಸಿಸಿಬಿ, ಸೇರಿದಂತೆ ಇತರ ಅಧಿಕಾರಿಗಳ ವೇಷ ಧರಿಸಿ ವೀಡಿಯೋ ಕಾಲ್ ಮೂಲಕ ವಿಚಾರಣೆ ನಡೆಸ್ತಾರೆ.

ಆಧಾರ್ನಲ್ಲಿರುವ ಅಥವಾ ಸರ್ಕಾರಿ ದಾಖಲೆಯಲ್ಲಿರುವ ಗುರುತು ಪತ್ತೆಗೆ ವಿವಸ್ತ್ರಗೊಳಿಸ್ತಾರೆ.  ಈ ಪ್ರಕರಣದಿಂದ ಪಾರಾಗಲು ಇಂತಿಷ್ಟು ಹಣ ಕೇಳ್ತಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ಇದು ಒಂದು ಉದಾಹರಣೆಯಷ್ಟೇ, ಈ ರೀತಿ ಆರ್ಬಿಐ, ಆರೋಗ್ಯ ಅಧಿಕಾರಿಗಳು ಸೇರಿದಂತೆ ಹಲವರ ಸೋಗಿನಲ್ಲಿ ಕರೆಗಳು ಬರಬಹುದು. ಎಚ್ಚರ…

ಈ ರೀತಿ ಕರೆ ಬಂದಾಗ ಕರೆಗೆ ಉತ್ತರಿಸಬೇಡಿ.. ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ, ಕಾಲ್ ರೆಕಾರ್ಡ್ ಮಾಡಿಕೊಳ್ಳಿ.. ಆಧಾರ್, ಓಟಿಪಿ, ಬ್ಯಾಂಕ್ ಡೀಟೈಲ್ಸ್ ಯಾವುದನ್ನೂ ಕೊಡಬೇಡಿ. ಈ ರೀತಿ ಕರೆ ಬಂದ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಗೆ ಕರೆ ಮಾಡಿ ದೂರು ನೀಡಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ