ಕಲಬುರ್ಗಿ : ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಇಷ್ಟು ದಿನ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ ಹಾಗೂ ಇನ್ನೂ 5 ಕೆಜಿ ಅಕ್ಕಿಯ ಬದಲು ಡಿಬಿಟಿ ಮೂಲಕ ಮನೆಯಲ್ಲಿ ಎಷ್ಟು ಸದಸ್ಯರು ಇರುತ್ತಾರೆ ಅಷ್ಟು ಮೊತ್ತದ ಹಣ ಸಂದಾಯ ಮಾಡುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದರಿಂದ ಇನ್ನು ಮುಂದೆ ಹಣದ ಬದಲಾಗಿ ಅಕ್ಕಿ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಈ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಆಯ್ಕೆಕೊಡಲು ಇದೀಗ ಮುಂದಾಗಿದೆ. ಬಿಪಿಎಲ್ ಫಲಾನುಭವಿಗಳಿಗೆ ಆದಷ್ಟು ಬೇಗ ಅಕ್ಕಿ ನೀಡುತ್ತೇವೆ. ಇಷ್ಟು ದಿನ ಡಿಬಿಟಿ ಮೂಲಕ ಹಣ ಹಾಕಲಾಗುತ್ತಿತ್ತು. ಇದೀಗ ಹಣ ಹಾಕುವ ಬದಲು ಜನರಿಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ BPL ಕಾರ್ಡ್ ಮುಂದುವರಿಸುತ್ತೇವೆ. ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಸೂಚಿಸಲಾಗಿದ್ದು, ಇನ್ನು ಹೊಸ ಬಿಪಿಎಲ್ ಕಾರ್ಡ್ ಗಾಗಿ ಸಾಕಷ್ಟು ಅರ್ಜಿಗಳು ಬಂದಿವೆ. ಸರ್ವರ್ ಸಮಸ್ಯೆ ಬಗೆಹರಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುತ್ತೇವೆ ಎಂದು ಹೇಳಿದ್ಧಾರೆ.