ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದ ಸಮೀಪದಲ್ಲೇ ತಮಿಳುನಾಡಿ ರಾಜ್ಯಕ್ಕೆ ಸೇರುವ ತಾಳವಾಡಿ ತಾಲೂಕಿದೆ. ಅಲ್ಲಿ ಗುಮಟಾಪುರ ಅನ್ನೋ ಗ್ರಾಮವೊಂದಿದೆ. ಇಲ್ಲಿ ಪ್ರತಿವರ್ಷ ದೀಪಾವಳಿಯ ಮರುದಿನ ಗೋರೆ ಹಬ್ಬ ಎಂಬ ವಿಶೇಷ ಹಬ್ಬವನ್ನ ಆಚರಣೆ ಮಾಡುತ್ತಾರೆ. ಈ ಹಬ್ಬದ ವಿಶೇಷ ಏನಪ್ಪ ಅಂದ್ರೆ, ಊರ ಮಧ್ಯದಲ್ಲಿ ಎರಡು ಟ್ರ್ಯಾಕ್ಟರ್ ಸಗಣಿಯನ್ನ ಸುರಿಯಲಾಗುತ್ತೆ. ಬಳಿಕ ದೇಗುಲದ ಅರ್ಚಕರು ಬಂದು ಆ ಸಗಣಿ ಗುಡ್ಡೆಗೆ ಪೂಜೆ ಸಲ್ಲಿಸಿದ ಬಳಿಕ ಎರಚಾಟ ಆರಂಭವಾಗುತ್ತೆ. ಸಗಣಿ ಉಂಡೆ ಮಾಡ್ಕೊಂಡು ಒಬ್ಬರ ಮೇಲೆ ಒಬ್ಬರು ಎರಚಾಡುತ್ತಾ ಬೈದುಕೊಳ್ಳೋದೆ ಈ ಹಬ್ಬದ ವಿಶೇಷ
ಸುಮಾರು ನೂರಕ್ಕೂ ಹೆಚ್ಚು ವರ್ಷಗಳಿಂದಲೂ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಪಟಾಕಿ ಸದ್ದು, ಮಂಗಳ ವಾದ್ಯಗಳ ಮೇಳದೊಂದಿಗೆ ಶಿಳ್ಳೆ ಚಪ್ಪಾಳೆ, ಅರಚಾಟ ಕಿರುಚಾಟದಿಂದ ಆರಂಭವಾಗುವ ಈ ಹಬ್ಬ ಸಾಮರಸ್ಯದಿಂದ ಕೂಡಿರುತ್ತೆ. ಈ ಹಬ್ಬದ ಆಚರಣೆ ವೇಳೆ ಕತ್ತೆ ಮರೆವಣಿಗೆಯನ್ನೂ ಮಾಡಲಾಗುತ್ತೆ. ಅದರ ಮೇಲೆ ಒಬ್ಬನನ್ನ ಕೂರಿಸಿ ಚಾಡಿಕೋರ ಎಂದು ಮೂದಲಿಸುತ್ತಾ ಮರೆವಣಿಗೆ ಮಾಡುತ್ತಾರೆ.
ಇನ್ನು ಈ ಹಬ್ಬದ ಆಚರಣೆ ಯಾಕೆ ಅಂತ ನೋಡಿದ್ರೆ, ಬೀರಪ್ಪ ಎಂಬಾತ ಜಮೀನ್ದಾರರ ಬಳಿ ಜೀತ ಮಾಡುತ್ತಿರುತ್ತಾನೆ. ಆತ ನಿಧನ ಹೊಂದಿದ ಬಳಿಕ ಅವನ ಜೋಳಿಗೆ ಮತ್ತು ಬೆತ್ತವನ್ನ ತಿಪ್ಪೆಗೆ ಎಸೆದಿದ್ದರಂತೆ. ಅದೊಂದು ದಿನ ತಿಪ್ಪೆಯಲ್ಲಿ ರಕ್ತ ಕಾಣಿಸಿಕೊಳ್ಳಲಾರಂಭಿಸಿತು. ಏನು ಅಂತ ನೋಡಿದ್ರೆ, ಅಲ್ಲಿ ಶಿವಲಿಂಗವಿತ್ತಂತೆ. ಹೀಗಾಗಿ ಅದೇ ತಿಪ್ಪೆಯ ಮೇಲೆ ಬೀರೇಶ್ವರ ದೇವಸ್ಥಾನ ನಿರ್ಮಿಸಿ ಸಗಣಿ ಎರಚಾಡುವ ಆಚರಣೆ ಮಾಡಿಕೊಂಡು ಬಂದಿದ್ದಾರೆ.