ವಿದೇಶ

ನದಿಯಲ್ಲಿ ಮುಳುಗಿದ ಮಾಲೀಕ..ಬಂದೇ ಬರುತ್ತಾನೆಂದು ಕಾಯುತ್ತಿರುವ ಶ್ವಾನ..!

ನಾಯಿ ಮನುಷ್ಯನ ಅತ್ತುತ್ತಮ ಸ್ನೇಹಿತ, ನಿಯತ್ತಿನ ಪ್ರಾಣಿ ಅನ್ನೋ ಮಾತು ಸುಮ್ಮನೇ ಬಂದಿಲ್ಲ. ಅದೆಷ್ಟೋ ಉದಾಹರಣೆಗಳು ಶ್ವಾನಪ್ರೇಮಕ್ಕೆ ಸಾಕ್ಷಿಯಾಗಿವೆ. ತನಗೆ ಅನ್ನ ಹಾಕಿದ ಮಾಲೀಕ ಒಂದೆರಡು ದಿನ ಕಾಣಿಸಿಕೊಳ್ಳದಿದ್ದರೆ, ಆ ಜೀವ ಅದೆಷ್ಟು ಹಾತೊರೆಯುತ್ತದೆ ಗೊತ್ತಾ.. ಒಂದು ತಾಯಿ ಮಗುವಿನ ಬಾಂಧವ್ಯದಷ್ಟೇ ಪವಿತ್ರ ಈ ಶ್ವಾನ ಪ್ರೇಮ. ಅದಕ್ಕೆ ಮತ್ತೊಂದು ಜೀವಂತ ಸಾಕ್ಷಿ ರಷ್ಯಾದಲ್ಲಿ ನಡೆದ ಆ ಒಂದು ಘಟನೆ.

ಈಗ ನಾವು ಹೇಳ್ತಿರೋದು ಬೆಲ್ಕಾ ಅನ್ನೋ ಒಂದು ಮುದ್ಧಾದ, ಅತ್ಯಂತ ನಿಯತ್ತಿನ ಶ್ವಾನದ ಕಥೆ. ‌ಮಾಲೀಕನೇ ಜೀವ, ಜೀವಾಳ ಎಂದುಕೊಂಡಿದ್ದ ಬೆಲ್ಕಾ ಈಗ ಒಬ್ಬಂಟಿಯಾದ ಕಥೆ..ಹೌದು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಲ್ಕಾ, ತನ್ನ ಮಾಲೀಕನ ಜೊತೆ ನದಿಯ ಬಳಿ ಹೋಗಿತ್ತು. ಕೊರೆಯುವ ಚಳಿಯ ವಾತಾವರಣದಿಂದ, ನದಿ ಹೆಪ್ಪುಗಟ್ಟಿತ್ತು. ಹೀಗಿದ್ದರೂ ಬೆಲ್ಕಾ ಮಾಲೀಕ ಸೈಕ್ಲಿಂಗ್‌ ಮಾಡಲು ಮುಂದಾದ. ಆದ್ರೆ ದುರಾದೃಷ್ಟವಶಾತ್‌ ಜವರಾಯ ಅಲ್ಲೇ ಕಾಯುತ್ತಿದ್ದನೋ ಏನೋ..ಬೆಲ್ಕಾ ಮಾಲೀಕ ಹೆಪ್ಪುಗಟ್ಟಿದ ನದಿಯ ಪಾಲಾದ. ಆತನನ್ನು ರಕ್ಷಿಸಲು ಅಲ್ಲೇ ಇದ್ದ ಜನರೆಲ್ಲ ಪ್ರಯತ್ನ ಪಟ್ಟರು. ಆದರೆ ಕೊನೆಗೂ ಬೆಲ್ಕಾ ಮಾಲೀಕ ಉಳಿಯಲೇ ಇಲ್ಲ. ಬದಲಾಗಿ ಆತ ಉಫಾ ಎಂಬ ನದಿಯಲ್ಲಿ ಶವವಾಗಿ ಪತ್ತೆಯಾದ.

ಇತ್ತ ಬೆಲ್ಕಾ ಮಾತ್ರ ತನ್ನ ಮಾಲೀಕನನ್ನು ಕಳೆದುಕೊಂಡು ಒಬ್ಬಂಟಿಯಾಯ್ತು. ಇಂದಿಗೂ ಅದಕ್ಕೆ ತನ್ನ ಮಾಲೀಕ ಸತ್ತು ಹೋಗಿದ್ದಾನೆ ಎಂಬ ಅರಿವೇ ಆಗಿಲ್ಲ. ಬದಲಾಗಿ ನನ್ನ ಮಾಲೀಕ ಬರುತ್ತಾನೆ ಎಂದು ಆ ಶ್ವಾನ ಈ ಕ್ಷಣಕ್ಕೂ ಕಾಯುತ್ತಲೇ ಇದೆ. ನನ್ನನ್ನು ಸಾಕಿದವ ಎಲ್ಲಿ ಹೋದ.. ನನಗೆ ಅನ್ನ ಹಾಕಿದ ಮಾಲೀಕ ಇಲ್ಲೆ ಎಲ್ಲೋ ಸಿಲುಕಿದ್ದಾನೆ. ಈಗಲೋ, ಆಗಲೋ ಬರುತ್ತಾನೆ. ನನ್ನನ್ನು ಅವನೇ ಮನೆಗೆ ಕರೆದುಕೊಂಡು ಹೋಗುತ್ತಾನೆ. ನನ್ನ ಮಾಲೀಕನಿಲ್ಲದೇ ಈ  ಪ್ರಪಂಚವೇ ಶೂನ್ಯವಾಗಿದೆ. ಅವನು ಬರುವವರೆಗೂ ನಾನು ಇಲ್ಲಿಂದ ಹೋಗೋದಿಲ್ಲ  ಎಂದು ಪರಿತಪಿಸುತ್ತಿದೆ. ಆದ್ರೆ ಆತ ಮಾತ್ರ ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾನೆ. 

ಇನ್ನು ಮಾಲೀಕರನ್ನು ಕಳೆದುಕೊಂಡ ಶ್ವಾನ ಕೊರಗಿ ಕಾದಿರುವ ಉದಾಹರಣೆ ಅದೆಷ್ಟೋ ಇದೆ. ಅದರಲ್ಲಿ ಅಚ್ಚಳಿಯದೆ ಉಳಿದಿರುವ ಘಟನೆ ಜಪಾನ್‌ನಲ್ಲಿ ನಡೆದಿತ್ತು. ಇದೀಗ ರಷ್ಯಾದಲ್ಲಿ ನಡೆದ ಈ ಘಟನೆ ಕೂಡ ಅಂಥದ್ದೇ. ಒಟ್ನಲ್ಲಿ ಶ್ವಾನ ಬರೀ ಪ್ರಾಣಿಯಲ್ಲ. ಭಾವ ತುಂಬಿದ ಜೀವ ಅನ್ನೋದಕ್ಕೆ ಇದು ಮೂಕ ಸಾಕ್ಷಿಯಾಗಿದೆ.