ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ತಿಂಗಳು ನಡೆಯಲಿರುವ ತಮ್ಮ ಪದಗ್ರಹಣ ಸಮಾರಂಭಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಆಹ್ವಾನಿಸಿದ್ಧಾರೆ.
ಚೀನಾ ಅಧ್ಯಕ್ಷರಿಗೆ ಆಹ್ವಾನ ನೀಡಿರುವ ಕುರಿತು ಟ್ರಂಪ್ ಅವರ ವಕ್ತಾರೆ ಕರೋಲಿನ್ ಲೀವಿಟ್ ಗುರುವಾರ ದೃಢಪಡಿಸಿದ್ದಾರೆ. ಜತೆಗೆ ಅಧ್ಯಕ್ಷ ಟ್ರಂಪ್ ಮಿತ್ರರಾಷ್ಟ್ರಗಳು ಮಾತ್ರವಲ್ಲದೆ ನಮ್ಮ ವಿರೋಧಿಗಳು ಮತ್ತು ನಮ್ಮ ಪ್ರತಿಸ್ಪರ್ಧಿಗಳೂ ಆಗಿರುವ ದೇಶಗಳ ನಾಯಕರೊಂದಿಗೆ ಮುಕ್ತ ಸಂವಾದ ನಡೆಸುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಅವರು ತಮ್ಮ ಮೊದಲ ಅವಧಿಯಲ್ಲಿ ಇದೇ ರೀತಿ ಮಾಡಿದ್ದರು ಮತ್ತು ಅದಕ್ಕಾಗಿ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದವು. ಆದರೆ ಇದು ವಿಶ್ವದಾದ್ಯಂತ ಶಾಂತಿ ಮೂಡಲು ಕಾರಣವಾಯಿತು. ಟ್ರಂಪ್ ಯಾರ ಜೊತೆಗೆ ಬೇಕಾದರೂ ಮಾತನಾಡಲು ಸಿದ್ಧರಿದ್ದಾರೆ. ಅವರು ಯಾವಾಗಲೂ ಅಮೆರಿಕದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.
ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಚೀನಾ ಲೂಟಿಕೋರ ವ್ಯಾಪಾರ ಕ್ರಮಗಳನ್ನು ಅನುಸರಿಸುತ್ತಿದೆ ಮತ್ತು ಸಾವಿರಾರು ಅಮೆರಿಕನ್ನರ ಸಾವಿಗೆ ಕಾರಣವಾದ ಮಾದಕವಸ್ತು ಜಾಲದಲ್ಲಿ ಅದರ ಪಾತ್ರವಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಚೀನಾ "ಅಭಿವೃದ್ಧಿಶೀಲ ದೇಶ" ಸ್ಥಾನಮಾನವನ್ನು ಮುಂದುವರಿಸಿಕೊಂಡು ಅನುಕೂಲಕರ ರಫ್ತು ಸ್ಥಾನಮಾನ ಪಡೆಯುವುದನ್ನು ಮುಂದುವರಿಸಿದೆ ಎಂದು ಟೀಕಿಸಿದ್ದರು.
ಟ್ರಂಪ್ ಆಹ್ವಾನ ನೀಡಿದ್ದರೂ ಸಹ ಕ್ಸಿ ಜಿನ್ ಪಿಂಗ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗುತ್ತಿದೆ. ಇನ್ನು ಟ್ರಂಪ್ ಆಹ್ವಾನದ ಕುರಿತು ಕ್ಸಿ ಜಿನ್‌ಪಿಂಗ್ ಕಚೇರಿ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನೂ ನೀಡಿಲ್ಲ…