ವಾಷಿಂಗ್ಟನ್: 2025ರ ಜನವರಿ 20 ರೊಳಗೆ ಇಸ್ರೇಲ್‌ನಿಂದ ಅಪಹರಿಸಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ಇಲ್ಲದಿದ್ದರೆ ನಿಮ್ಮ ವಿನಾಶಕ್ಕೆ ಸಿದ್ಧರಾಗಿ ಎಂದು ಹಮಾಸ್ ಉಗ್ರರಿಗೆ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ವಾರ್ನಿಂಗ್ ಕೊಟ್ಟಿದಾರೆ.
ಜನವರಿ 20ರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಗಾಜಾ ಪ್ರದೇಶದಲ್ಲಿ ಬಂಧಿಯಾಗಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಮಧ್ಯಪ್ರಾಚ್ಯ ವಿನಾಶಕ್ಕೆ ಗುರಿಯಾಗಲಿದೆ. ಮಾನವೀಯತೆಯ ವಿರುದ್ಧ ಈ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದಾರೆ.
ಹಮಾಸ್ ಉಗ್ರರು ಅಪಹರಿಸಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವಲ್ಲಿ ಜೋ ಬೈಡನ್ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಟ್ರಂಪ್ ಆರೋಪಿಸುತ್ತಾ ಬಂದಿದ್ದರು. ಈಗ ಟ್ರಂಪ್ 2 ನೇ ಬಾರಿಗೆ ಅಧ್ಯಕ್ಷರಾಗಿ ಪದಗ್ರಹಣ ಮಾಡಲು ಸಿದ್ಧವಾಗಿರುವ ವೇಳೆಯಲ್ಲೇ ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಒತ್ತೆಯಾಳುಗಳ ಬಿಡುಗಡೆಯಾಗದಿದ್ದರೆ ಹಮಾಸ್ ಮೇಲೆ ಉಗ್ರ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಮುನ್ಸೂಚನೆ ಕೊಟ್ಟಿದಾರೆ.

ಇಸ್ರೇಲ್ನ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಇಸ್ರೇಲ್ ಮೇಲೆ ನಡೆದ ದಾಳಿಯ ಸಮಯದಲ್ಲಿ, ಹಮಾಸ್ ಉಗ್ರರು ಇಸ್ರೇಲಿ-ಅಮೆರಿಕನ್ ನಾಗರಿಕರು ಸೇರಿದಂತೆ 250 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಕರೆದೋಯ್ತಿದ್ದರು. 101 ವಿದೇಶಿ ಮತ್ತು ಇಸ್ರೇಲಿ ಒತ್ತೆಯಾಳುಗಳು ಗಾಜಾದಲ್ಲಿ ಉಳಿದಿದ್ದು, ಅರ್ಧದಷ್ಟು ಜನರು ಮಾತ್ರ ಜೀವಂತವಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಇದೇ ವೇಳೆಯಲ್ಲೇ 33 ಒತ್ತೆಯಾಳುಗಳು ಮೃತಪಟ್ಟಿದಾರೆ ಎಂದು ಹಮಾಸ್ ಹೇಳಿಕೆ ನೀಡಿದೆ.