ವೈರಲ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ಇತಿಹಾಸ ನಿಮಗೆ ಗೊತ್ತಾ..?

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈವೋಲ್ಟೇ ಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಿಂದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಜೆಡಿಎಸ್ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿದಿದ್ದಾರೆ.

ರಾಮನಗರ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಿಂದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಜೆಡಿಎಸ್ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದೆ.

ಕ್ಷೇತ್ರದ ಇತಿಹಾಸ : ರಾಮನಗರ ಜಿಲ್ಲೆಯ ಪ್ರಮುಖ ತಾಲೂಕು ಚನ್ನಪಟ್ಟಣ. ಇದೇ ಹೆಸರಿನ ವಿಧಾನಸಭಾ ಕ್ಷೇತ್ರ ಹೊಂದಿರುವ ಈ ಕ್ಷೇತ್ರ, ಐತಿಹಾಸಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊಂಡಿರುವ ಸ್ಥಳ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಬೊಂಬೆನಗರಿ ಎಂದು ಕರೆಯಿಸಿಕೊಳ್ಳುತ್ತಿರುವ ಈ ಕ್ಷೇತ್ರ ಪ್ರಾಚೀನ ಕಾಲದಲ್ಲಿ ಜ್ಞಾನಮಂಟಪ ಕ್ಷೇತ್ರ ಎಂದು ಕರೆಸಿಕೊಳ್ಳುತ್ತಿತ್ತು. ಮರದ ಕರಕುಶಲ ವಸ್ತುಗಳಿಗೆ, ಮರದ ಗೊಂಬೆ ಮತ್ತು ಆಟಿಕೆಗಳಿಗೆ ಚನ್ನಪಟ್ಟಣ ಸುಪ್ರಸಿದ್ದ. ವಿಧಾನಸೌಧ ನಿರ್ಮಾತೃ ಕೆಂಗಲ್‌ ಹನುಮಂತಯ್ಯವರ ಹುಟ್ಟೂರು ಇರುವುದು ಈ ಕ್ಷೇತ್ರದ ವ್ಯಾಪ್ತಿಯಲ್ಲೇ. ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಇದು ಸೇನಾ ನೆಲೆಯಾಗಿತ್ತು. ಹೈದರಾಲಿಯ ಗುರು ಅಕ್ಮಲ್ ಶಾ ಖಾದ್ರಿಯ ಮಸೀದಿಯೂ ಚನ್ನಪಟ್ಟಣದಲ್ಲಿದೆ. ಇವುಗಳ ಜೊತೆಗೆ ಕ್ಷೇತ್ರದಾದ್ಯಂತ  ಸಾವಿರಕ್ಕೂ ಹೆಚ್ಚಿನ ವೀರಗಲ್ಲು, ಮಾಸ್ತಿಕಲ್ಲುಗಳಿವೆ. ಪಾಳೇಗಾರರ ಆಡಳಿತವನ್ನೂ ಚನ್ನಪಟ್ಟಣ ಕಂಡಿತ್ತೆನ್ನುವುದು ಗಮನಾರ್ಹ. 

ಚನ್ನಪಟ್ಟಣ ಕ್ಷೇತ್ರದ ಮೊದಲ ಶಾಸಕರಾಗಿದ್ದವರು ವಿ. ವೆಂಕಟಪ್ಪ. 1951ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು ಕೆಎಂಪಿಪಿಯ ಬಿ. ಕೆ. ಪುಟ್ಟರಾಮಯ್ಯ ವಿರುದ್ಧ 1,372 ಮತಗಳ ಗೆಲುವು ದಾಖಲಿಸಿದ್ದರು. 1957ರ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್‌ ಪಕ್ಷದ ಬಿ.ಕೆ. ಪುಟ್ಟರಾಮಯ್ಯ ಕಾಂಗ್ರೆಸ್‌ನ ಬಿ.ಜೆ. ಲಿಂಗೇಗೌಡರನ್ನು ಸೋಲಿಸಿ ಇಲ್ಲಿನ ಶಾಸಕರಾದರು. 1962ರಲ್ಲಿ ಕಾಂಗ್ರೆಸ್‌ನ ಬಿ.ಜೆ.ಲಿಂಗೇಗೌಡ, ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯ  ಬಿ.ಕೆ.ಪುಟ್ಟರಾಮಯ್ಯ ವಿರುದ್ಧ ಗೆದ್ದಿದ್ದರು. 1967 ಹಾಗೂ 1972ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಟಿ.ವಿ.ಕೃಷ್ಣಪ್ಪ ಇಲ್ಲಿನ ಶಾಸಕರಾಗಿದ್ದರು. ಉಳಿದಂತೆ 1978 ಕಾಂಗ್ರೆಸ್‌ನ ಡಿ‌.ಟಿ ರಾಮು, 1983 ಹಾಗೂ 1985ರಲ್ಲಿ ಜನತಾ ಪಕ್ಷದ ಎಂ.ವರದೇಗೌಡ, 1989 ಕಾಂಗ್ರೆಸ್‌ನ ಸಾದತ್ ಅಲಿ ಖಾನ್, 1994ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ವರದೇಗೌಡ ಇಲ್ಲಿನ ಜನಪ್ರತಿನಿಧಿಗಳಾಗಿದ್ದರು. 

ಇನ್ನು ಚನ್ನಪಟ್ಟಣದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನು ತೋರಿಸಿದ ಕ್ಷೇತ್ರಗಳ ಸಾಲಿನಲ್ಲಿ ಚನ್ನಪಟ್ಟಣವೂ ಒಂದು. ಆರಂಭದಲ್ಲಿ ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದವರು ಸಿ.ಪಿ. ಯೋಗೇಶ್ವರ್‌. ಸಿನಿಮಾ ನಟನಾಗಿ ಹೆಸರು ಮಾಡಿದ್ದ ಯೋಗೇಶ್ವರ್‌ ಹಲವು ಬಾರಿ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದ ಅವರು, 2004 ಮತ್ತು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಇದು ಒಂದರ್ಥದಲ್ಲಿ ವ್ಯಕ್ತಿಗತ ಹ್ಯಾಟ್ರಿಕ್‌ ಸಾಧನೆ. ರಾಜಕೀಯ ಪಲ್ಲಟದ ಕಾರಣ ಶಾಸಕರಾಗಿದ್ದ ಯೋಗೇಶ್ವರ್ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಯ್ತು. 2009ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಸಿ.ಅಶ್ವತ್ಥ್‌ ಯೋಗೇಶ್ವರ್‌ಗೆ ಸೋಲುಣಿಸಿದ್ದರು. ಬಳಿಕ 2011ರಲ್ಲಿ ಎಂ.ಸಿ.ಅಶ್ವಥ್ ಆಪರೇಷನ್ ಕಮಲಕ್ಕೆ ಒಳಗಾದ ಹಿನ್ನೆಲೆ ಮತ್ತೆ ಉಪಚುನಾವಣೆ ನಡೆದು ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧೆ ಮಾಡಿ ಜಯಗಳಿಸುತ್ತಾರೆ. ಇನ್ನು 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದ ಇದೇ ಯೋಗೇಶ್ವರ್ ವಿಜಯ ಪತಾಕೆ ಹಾರಿಸಿ, ಪಕ್ಷಕ್ಕಿಂತಲೂ ವ್ಯಕ್ತಿಯೇ ಪ್ರಮುಖ ಎನ್ನುವುದನ್ನ ಮತ್ತೆ ನಿರೂಪಿಸುತ್ತಾರೆ. ಬಳಿಕ 2018ರಲ್ಲಿ ಚನ್ನಪಟ್ಟಣದಿಂದ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿಪಿವೈ ಸೋಲಿಸಿ ಎರಡನೇ ಬಾರಿಗೆ ಸಿಎಂ ಆಗ್ತಾರೆ. ನಂತರ 2023ರ ಸಾರ್ವತ್ರಿಕ ಚುನಾವಣೆಯಲ್ಲೂ ಗೆದ್ದು ಬೀಗುವ ಹೆಚ್ಡಿಕೆ, 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಿ ಗೆದ್ದು ಕೇಂದ್ರ ಸಚಿವರಾಗಿದ್ದಾರೆ. ಬಳಿಕ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಇದೀಗ ಕ್ಷೇತ್ರಕ್ಕೆ ಮತ್ತೊಂದು ಉಪ ಚುನಾವಣೆ ಎದುರಾಗಿದೆ.

ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿಗಳು

ಕಾಂಗ್ರೆಸ್- ಸಿ.ಪಿ.ಯೋಗೇಶ್ವರ್.
ಜೆಡಿಎಸ್ - ನಿಖಿಲ್ ಕುಮಾರಸ್ವಾಮಿ.

ಚನ್ನಪಟ್ಟಣ 2023 ಚುನಾವಣೆಯ ಫಲಿತಾಂಶ

* ಹೆಚ್.ಡಿ.ಕುಮಾರಸ್ವಾಮಿ   (ಜೆಡಿಎಸ್) -96,592 (49.%)ಮತಗಳು.
* ಸಿ.ಪಿ.ಯೋಗೇಶ್ವರ್ (ಬಿಜೆಪಿ)- 80,677 (41%) ಮತಗಳು.
* ಗಂಗಾಧರ್  (ಕಾಂಗ್ರೆಸ್) -15,374  ಮತಗಳು.

ಹೆಚ್.ಡಿ.ಕುಮಾರಸ್ವಾಮಿ 15,965 ಮತಗಳ ಅಂತರದಿಂದ ಗೆಲುವು.

2024ರ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಮತಗಳು.

ಕಾಂಗ್ರೆಸ್-85,357(ಡಿ.ಕೆ.ಸುರೇಶ್)
ಬಿಜೆಪಿ-ಜೆಡಿಎಸ್-1,06,972(ಡಾ.ಮಂಜುನಾಥ್)

ಕ್ಷೇತ್ರದ ಮತದಾರರ ಸಂಖ್ಯೆ, ಜಾತಿವಾರು ಲೆಕ್ಕಾಚಾರ

ಒಟ್ಟು ಮತದಾರರು- 2,32,594.
ಪುರುಷ ಮತದಾರರು -1,12,131
ಮಹಿಳಾ ಮತದಾರರು-1,20,404
ಇತರೆ ಮತದಾರರು- 08

ಒಕ್ಕಲಿಗ -1,20,000
ದಲಿತ- 41,500
ಮುಸ್ಲಿಂ-31,000
ಲಿಂಗಾಯತ-11,500
ತಿಗಳರು -9,000
ಬೆಸ್ತರು -10,500
ಇತರೆ- 10,500

ಸದ್ಯ ಮೈತ್ರಿ ಕ್ಯಾಂಡಿಡೇಟ್ : 1. ನಿಖಿಲ್ ಕುಮಾರಸ್ವಾಮಿ (ಜೆಡಿಎಸ್)

ಕಾಂಗ್ರೆಸ್ ಕ್ಯಾಂಡಿಡೇಟ್: 1. ಸಿ.ಪಿ.ಯೋಗೇಶ್ವರ್

REFRENCE (ಉಲ್ಲೇಖ)

1952-ವಿ.ವೆಂಕಟಪ್ಪ(ಕಾಂಗ್ರೆಸ್)

1957-ಕೆ.ಪಿ.ಪುಟ್ಟರಾಮಯ್ಯ(ಪಿಎಸ್ಪಿ)
1962-ಬಿ.ಜೆ.ಲಿಂಗೇಗೌಡ(ಕಾಂಗ್ರೆಸ್)
1967-ಟಿ.ವಿ.ಕೃಷ್ಣಪ್ಪ(ಪಕ್ಷೇತರ)
1972-ಟಿ.ವಿ.ಕೃಷ್ಣಪ್ಪ(ಕಾಂಗ್ರೆಸ್)
1978-ಡಿ.ಟಿ.ರಾಮು(ಕಾಂಗ್ರೆಸ್- ಐ)
1983- ವರದೇಗೌಡ (ಜನತಾಪಾರ್ಟಿ)
1985 - ವರದೇಗೌಡ (ಜನತಾ ಪಾರ್ಟಿ)
1989 - ಸಾದತ್ ಅಲಿ ಖಾನ್ (ಕಾಂಗ್ರೆಸ್)
1994 - ಎಂ.ವರದೇಗೌಡ(ಜನತಾದಳ)
1999 - ಸಿ.ಪಿ.ಯೋಗೇಶ್ವರ್ (ಪಕ್ಷೇತರ)
2004 - ಸಿ.ಪಿ.ಯೋಗೇಶ್ವರ್ (ಕಾಂಗ್ರೆಸ್)
2008 - ಸಿ.ಪಿ.ಯೋಗೇಶ್ವರ್ (ಕಾಂಗ್ರೆಸ್)
2009 - ಎಂ.ಸಿ.ಅಶ್ವಥ್  ಜೆಡಿಎಸ್ (ಉಪಚುನಾವಣೆ)
2011 - ಸಿ.ಪಿ.ಯೋಗೇಶ್ವರ್  ಬಿಜೆಪಿ(ಉಪಚುನಾವಣೆ)
2013 - ಸಿ.ಪಿ.ಯೋಗೇಶ್ವರ್  (ಸಮಾಜವಾದಿ)
2018 - ಹೆಚ್.ಡಿ.ಕುಮಾರಸ್ವಾಮಿ (ಜೆಡಿಎಸ್)
2023 - ಹೆಚ್.ಡಿ.ಕುಮಾರಸ್ವಾಮಿ- (ಜೆಡಿಎಸ್)