ಬೆಂಗಳೂರು : ಹೊಸೂರು ಸಮೀಪದ ಕೂತನಹಳ್ಳಿ ಗ್ರಾಮದಲ್ಲಿರುವ ಟಾಟಾ ಕಂಪನಿಯ ಎಲೆಕ್ಟ್ರಾನಿಕ್ ವಸ್ತುಗಳು ತಯಾರಾಗುತ್ತಿದ್ದ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕಂಪನಿಯ ಕೆಮಿಕಲ್ ಘಟಕದಲ್ಲಿ ಬೆಂಕಿ ಕಾಣಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ಕಂಪನಿ ಧಗಧಗನೇ ಹೊತ್ತಿ ಉರಿದಿದೆ. ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಈ ವೇಳೆ ಸಾವಿರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ರಾಯಕೋಟೆ ಮತ್ತು ಡೆಂಕಣಿಕೋಟೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಐದಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕೆಲಸ ನಡೆದಿದೆ. ಈ ಕಂಪನಿಯಲ್ಲಿ ಕಾರು ಮತ್ತು ಫೋನ್ ಬಿಡಿಭಾಗಗಳನ್ನು ತಯಾರಿಸಲಾಗುತ್ತಿತ್ತು.