ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿ ಗ್ರಾಮದಲ್ಲಿ ವೇಗವಾಗಿ ಹೋಗುತಿದ್ದ ವಾಹನದ ಚಾಲಕನಿಗೆ ಪ್ರಶ್ನಿಸಿದಕ್ಕೆ ಯುವಕನಿಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಶ್ರೀನಿವಾಸ ಬಿರಾದಾರ (35) ಕೊಲೆಯಾದ ದುರ್ದೈವಿ ಯಾಗಿದ್ದಾನೆ. ಕೃಷಿಕರಾಗಿರುವ ಇವರು ಬಿಜೆಪಿ ಬೂತ್ ಘಟಕದ ಅಧ್ಯಕ್ಷ ಸಹ ಆಗಿದ್ದಾರೆ.
ಹೌದು, ಗ್ರಾಮಕ್ಕೆ ಸಮೀಪದಲ್ಲಿ ರಸ್ತೆ ಸುಧಾರಣಾ ಕಾರ್ಯ ನಡೆಯುತ್ತಿದ್ದು, ಅಲ್ಲಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಈ ರಸ್ತೆಯಿಂದ ವೇಗವಾಗಿ ಹೋಗುತ್ತಿತ್ತು. ಹೀಗಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಶ್ರೀನಿವಾಸ ಅವರ ಮೈಮೇಲೆ ಕೆಸರು ಸಿಡಿದಿದೆ.
ಈ ಕಾರಣಕ್ಕೆ ಕೋಪಗೊಂಡ ಶ್ರೀನಿವಾಸ ಚಾಲಕನಿಗೆ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಟಿಪ್ಪರ್ ನಿಲ್ಲಿಸಿದ ಚಾಲಕ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದು ಇವರ ತಲೆಗೆ ಹೊಡೆದಿದ್ದಾನೆ. ಬಲವಾದ ಪೆಟ್ಟಾಗಿದ್ದರಿಂದ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದ ಊರಿನ ಯುವಕರು ಹಾಗೂ ಪೊಲೀಸರು ಟಿಪ್ಪರ್ ನ್ನು ಬೆನ್ನಟ್ಟಿ ಚಾಲಕನನ್ನು ಹಿಡಿದಿದ್ದು, ಶಿವರಾಜ ಬನಸೂಡೆ ಚಾಲಕ ಆಗಿದ್ದು ಇಂಡಿ ತಾಲ್ಲೂಕಿನವನಾಗಿದ್ದಾನೆ. ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.